ಖ್ಯಾತ ಅರ್ಥಶಾಸ್ತ್ರಜ್ಞೆ, ಪದ್ಮಭೂಷಣ ಡಾ.ಇಶರ್ ಅಹ್ಲುವಾಲಿಯಾ ನಿಧನ

Update: 2020-09-26 12:48 GMT

ಹೊಸದಿಲ್ಲಿ.ಸೆ.26: ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಪತ್ನಿ,ಖ್ಯಾತ ಅರ್ಥಶಾಸ್ತ್ರಜ್ಞೆ ಹಾಗೂ ಪದ್ಮಭೂಷಣ ಪುರಸ್ಕೃತೆ ಡಾ.ಇಶರ್ ಜಜ್ ಅಹ್ಲುವಾಲಿಯಾ (74) ಅವರು ಮಿದುಳು ಕ್ಯಾನ್ಸರ್ ವಿರುದ್ಧ 10 ತಿಂಗಳ ಹೋರಾಟದ ಬಳಿಕ ಶನಿವಾರ ನಿಧನರಾದರು. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗಾಗಿ ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು.

ದಿಲ್ಲಿಯ ಚಿಂತನ ಚಿಲುಮೆ ಇಂಡಿಯನ್ ಕೌನ್ಸಿಲ್ ಫಾರ್ ರೀಸರ್ಚ್ ಆನ್ ಇಂಟರ್‌ನ್ಯಾಷನಲ್ ಇಕನಾಮಿಕ್ ರಿಲೇಷನ್ಸ್ (ಐಸಿಆರ್‌ಐಇಆರ್)ನ ಅಧ್ಯಕ್ಷೆಯಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಹ್ಲುವಾಲಿಯಾ ಒಂದು ತಿಂಗಳಷ್ಟೇ ಅನಾರೋಗ್ಯದಿಂದಾಗಿ ರಾಜೀನಾಮೆ ಸಲ್ಲಿಸಿದ್ದರು.

ಅಹ್ಲುವಾಲಿಯಾರ ನಿಧನದ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪಸೂಚಕ ಸಂದೇಶಗಳು ಹರಿದುಬಂದಿವೆ.

ಅಹುವಾಲಿಯಾರನ್ನು ಭಾರತದ ಅತ್ಯಂತ ಗೌರವಾನ್ವಿತ ಆರ್ಥಿಕ ತಜ್ಞರಲ್ಲೊಬ್ಬರು ಎಂದು ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹೇಳಿದ್ದರೆ,ಕ್ಯಾನ್ಸರ್ ವಿರುದ್ಧ ಧೀರ ಹೋರಾಟದ ಬಳಿಕ ಹಲವು ವರ್ಷಗಳ ಆಪ್ತಸ್ನೇಹಿತೆಯ ಸಾವು ಅಪಾರ ದುಃಖವನ್ನುಂಟು ಮಾಡಿದೆ. ಅವರ ಜೀವನ ಚರಿತ್ರೆ ಒಳ್ಳೆಯ ಜಗತ್ತಿನ ಕನಸು ಕಾಣುವ ಎಲ್ಲ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಟ್ವೀಟಿಸಿದ್ದಾರೆ.

 ಕ್ಯಾನ್ಸರ್ ವಿರುದ್ಧ ಅಹ್ಲುವಾಲಿಯಾರ ಹೋರಾಟವನ್ನು ನೆನಪಿಸಿಕೊಂಡಿರುವ ಬಯೊಕಾನ್ ಮುಖ್ಯಸ್ಥೆ ಕಿರಣ ಮುಜುಮ್ದಾರ್-ಶಾ ಅವರು ತಾವಿಬ್ಬರೂ ಒಟ್ಟಿಗೆ ಇದ್ದ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News