ವಿಪಕ್ಷಗಳು ದಾರಿ ತಪ್ಪಿಸಿವೆ ಎಂಬ ಆರೋಪ ನಿರಾಧಾರ: ರೈತರ ಸ್ಪಷ್ಟನೆ

Update: 2020-09-26 18:22 GMT
ಸಾಂದರ್ಭಿಕ ಚಿತ್ರ

ಚಂಡೀಗಢ, ಸೆ.26: ಕೃಷಿ ಮಸೂದೆಯಲ್ಲಿರುವ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದರಿಂದಾಗುವ ಹಾನಿಯನ್ನು ಅರಿತುಕೊಂಡ ಬಳಿಕ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದೇವೆ. ಕೃಷಿ ಮಸೂದೆಯ ಬಗ್ಗೆ ವಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂಬ ಸರಕಾರದ ಆರೋಪದಲ್ಲಿ ಹುರುಳಿಲ್ಲ ಎಂದು ಪಂಜಾಬ್‌ನ ರೈತರು ಹೇಳಿದ್ದು ಮಸೂದೆ ವಿರೋಧಿಸಿ ನಡೆಸುತ್ತಿರುವ ರೈಲು ರೋಕೋ ಚಳವಳಿ ಸೆಪ್ಟಂಬರ್ 29ರವರೆಗೂ ಮುಂದುವರಿಯಲಿದೆ ಎಂದಿದ್ದಾರೆ. ವಿಪಕ್ಷಗಳು ರೈತರನ್ನು ಪ್ರಚೋದಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ದೂರುತ್ತಿದ್ದಾರೆ. ಇದು ಸರಿಯಲ್ಲ. ನಾವು ಅಧಿಸೂಚನೆ(ಈಗ ಮಸೂದೆಯಾಗಿದೆ)ಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡಿದ್ದೇವೆ. ಕಾರ್ಪೊರೇಟ್ ಸಂಸ್ಥೆಗಳ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿ ಕೃಷಿ ಮಸೂದೆಯಲ್ಲಿ ಬದಲಾವಣೆ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ದೇಶದಾದ್ಯಂತದ ರೈತರ ಬೆಂಬಲ ದೊರಕಿದೆ.

ಇದು ಬೃಹತ್ ಜನಾಂದೋಲನವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿಗೆ ಮಸೂದೆ ರದ್ದುಗೊಳಿಸದೆ ಅನ್ಯಮಾರ್ಗವಿಲ್ಲವಾಗಿದೆ ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿಯ ರಾಜ್ಯ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಢೇರ್ ಹೇಳಿದ್ದಾರೆ. ತಮ್ಮದು ರಾಜಕೀಯೇತರ ಪ್ರತಿಭಟನೆಯಾಗಿದ್ದು ಪ್ರತಿಭಟನೆಯ ಸಂದರ್ಭ ಯಾವುದೇ ರಾಜಕೀಯ ಪಕ್ಷದವರು ತಮ್ಮಾಂದಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶವಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಪಂಜಾಬ್‌ನಲ್ಲಿ ರೈತರಿಂದ ರೈಲು ರೋಕೋ ಪ್ರತಿಭಟನೆ ಶನಿವಾರ ಮೂರನೇ ದಿನವೂ ನಡೆದಿದ್ದು ಕನಿಷ್ಟ 28 ಪ್ರಯಾಣಿಕರ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಂಯೋಜನಾ ಸಮಿತಿಯ ಆಶ್ರಯದಲ್ಲಿರುವ 265ಕ್ಕೂ ಅಧಿಕ ಸಂಘಟನೆಗಳು ಪಾಲ್ಗೊಂಡಿದ್ದವು. ಕೇಂದ್ರ ಸರಕಾರದಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ರೈತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News