ಕೋವಿಡ್: ದೇಶದಲ್ಲಿ ಸತತ 9ನೇ ದಿನ ಸರಾಸರಿ ಪ್ರಕರಣ ಇಳಿಕೆ

Update: 2020-09-27 03:44 GMT

ಹೊಸದಿಲ್ಲಿ, ಸೆ.27: ದೇಶದಲ್ಲಿ ಒಂದು ವಾರದ ಸರಾಸರಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಸತತ ಒಂಭತ್ತನೇ ದಿನ ಇಳಿಕೆಯಾಗಿದ್ದು, ಇದು ದೇಶದಲ್ಲಿ ಸಾಂಕ್ರಾಮಿಕದ ಗರಿಷ್ಠ ಮಟ್ಟ ಕಳೆದಿದೆ ಎನ್ನುವುದರ ಸೂಚಕವಾಗಿದೆ. ಭಾರತದಲ್ಲಿ ಮಾರಕ ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಸಾಪ್ತಾಹಿಕ ಸರಾಸರಿ ಪ್ರಮಾಣ ಇಳಿಕೆಯಾಗಿದೆ.

ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಪ್ರತಿದಿನದ ಕೋವಿಡ್-19 ಮಾದರಿಗಳ ಪರೀಕ್ಷೆ ಸೆಪ್ಟೆಂಬರ್ 17ಕ್ಕೆ 10.7 ಲಕ್ಷ ಇದ್ದುದು, 25ರವೇಳೆಗೆ 11.2 ಲಕ್ಷಕ್ಕೆ ಏರಿದೆ. ಸೆಪ್ಟಂಬರ್ 17ರಂದು ಹಿಂದಿನ ಒಂದು ವಾರದಲ್ಲಿ ಸರಾಸರಿ ದೈನಿಕ ಪ್ರಕರಣಗಳ ಸಂಖ್ಯೆ 93,199 ಇದ್ದುದು, ಇದೀಗ ಈ ಪ್ರಮಾಣ 85,131ಕ್ಕೆ ಇಳಿದಿದೆ ಎನ್ನುವುದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ (ಇಸಿಡಿಸಿ) ಅಂಕಿಅಂಶಗಳಿಂದ ತಿಳಿದುಬರುತ್ತದೆ. ಹಿಂದೆ ಸರಾಸರಿ ಪ್ರಕರಣಗಳ ಸಂಖ್ಯೆ ಕಡಿಮೆಯಾದ ನಿದರ್ಶನ ಇದ್ದರೂ, ಸತತ ಎರಡು ದಿನ ಮಾತ್ರ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು.

ಆದರೆ ಹಲವು ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹಲವು ದಿನ ಇಳಿಕೆ ಪ್ರವೃತ್ತಿ ತೋರಿದರೂ ಮತ್ತೆ ಹೆಚ್ಚಳವಾಗಿರುವ ನಿದರ್ಶನಗಳಿವೆ. ಉದಾಹರಣೆಗೆ ಅಮೆರಿಕದಲ್ಲಿ ಎಪ್ರಿಲ್ 11ರಂದು ಸರಾಸರಿ ಪ್ರಕರಣಗಳ ಸಂಖ್ಯೆ 31,942 ಇತ್ತು. ಸತತ ಇಳಿಕೆ ಪ್ರವೃತ್ತಿ ದಾಖಲಾಗಿ ಮೇ 29ರಂದು ಇದು 20,638ಕ್ಕೆ ಇಳಿದಿತ್ತು. ಆದರೆ ಜುಲೈ 20ರ ವೇಳೆಗೆ ಮತ್ತೆ ದೈನಿಕ ಸರಾಸರಿ ಪ್ರಕರಣಗಳ ಸಂಖ್ಯೆ 66,903ಕ್ಕೇರಿತು. ಮತ್ತೆ ಸೆಪ್ಟಂಬರ್ 13ಕ್ಕೆ 34,320ಕ್ಕೆ ಇಳಿದಿದೆ. ಸೆಪ್ಟೆಂಬರ್ 26ರಂದು ಅಲ್ಪ ಏರಿಕೆ ಕಂಡು 44,109ನ್ನು ತಲುಪಿತ್ತು. ರಶ್ಯ, ಸ್ಪೇನ್, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಕೂಡಾ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆ ದಾಖಲಿಸಿದ ಬಳಿಕ ಮತ್ತೆ ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News