ಕೇಂದ್ರ ಸರಕಾರದ ವಿರುದ್ಧ ಎಲ್ಲರೂ ಒಗ್ಗೂಡಬೇಕು: ಶಿರೋಮಣಿ ಅಕಾಲಿದಳ ಮುಖ್ಯಸ್ಥ

Update: 2020-09-27 03:54 GMT

ಲೂಧಿಯಾನಾ, ಸೆ.27: ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ರೈತ ಸಂಘಟನೆಗಳು ಸಂಘಟಿತವಾಗಬೇಕು ಎಂದು ಶಿರೋಮಣಿ ಅಕಾಲಿದಳ ಅಧ್ಯಕ್ಷ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಕರೆ ನೀಡಿದ್ದಾರೆ.

ಕೃಷಿ ಮಸೂದೆಗಳ ವಿರುದ್ಧ ಅಕ್ಟೋಬರ್ 1ರಂದು ಆಯೋಜಿಸಲು ಉದ್ದೇಶಿಸಿರುವ ಪ್ರತಿಭಟನೆಗೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಸಲುವಾಗಿ ಇಲ್ಲಿಗೆ ಆಗಮಿಸಿರುವ ಅವರು, ಕೃಷಿ ಮಸೂದೆಗಳನ್ನು ವಿರೋಧಿಸಿ ಅಕಾಲಿ ದಳ ನಿಯೋಗ ಪಂಜಾಬ್ ರಾಜ್ಯಪಾಲ ವಿಪಿಎಸ್ ಬದ್ನೋರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲ ತಕ್ತ್‌ಗಳಿಂದ ಪ್ರತಿಭಟನಾ ಜಾಥಾ ಆರಂಭವಾಗಲಿದ್ದು, ಮೊಹಾಲಿಯಲ್ಲಿ ಸಮಾವೇಶಗೊಳ್ಳಲಿವೆ. ಅದಾದ ಬಳಿಕ ಅಲಂಗೀರ್‌ನ ಗುರುದ್ವಾರ ಶ್ರೀ ಮಾಂಜಿಸಾಹಿಬ್‌ನಲ್ಲಿ ಸಭೆ ನಡೆಯಲಿದೆ.

ಯಾವುದೇ ಪಕ್ಷಗಳನ್ನು ಹೆಸರಿಸದೇ ಬಾದಲ್, ರಾಜಕೀಯ ಪಕ್ಷಗಳು ಇದರಲ್ಲಿ ಕ್ಷುಲ್ಲಕ ರಾಜಕೀಯ ಮಾಡಬಾರದು. ಕೇಂದ್ರದ ಕೃಷಿ ತಿದ್ದುಪಡಿ ಮಸೂದೆ ಅನ್ವಯವಾಗದಂತೆ ಇಡೀ ರಾಜ್ಯವನ್ನು ಏಕ ಕೃಷಿ ಮಾರುಕಟ್ಟೆಯಾಗಿ ಘೋಷಿಸುವ ಸಂಬಂಧ ಪಂಜಾಬ್ ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಋಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ-2017ಕ್ಕೆ ತಂದಿರುವ ತಿದ್ದುಪಡಿಗಳನ್ನು ರದ್ದುಪಡಿಸಬೇಕು ಎಂದೂ ಅವರು ಆಗ್ರಹಿಸಿದರು. ರೈತರು ಕೇಂದ್ರದ ಯಾವ ಕರಾಳ ಶಾಸನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆಯೋ, ರಾಜ್ಯ ಸರಕಾರ ತಂದಿರುವ ತಿದ್ದುಪಡಿಗಳು ಕೂಡಾ ಈ ಶಾಸನದಂತೆಯೇ ಇವೆ. ಇದನ್ನು ರದ್ದುಪಡಿಸುವ ರಾಜ್ಯ ಸರಕಾರದ ಕ್ರಮಗಳಿಗೆ ನಾವು ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಮಸೂದೆ ಕುರಿತ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎನ್‌ಡಿಎಯಿಂದ ಶನಿವಾರ ಹೊರಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News