ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ನಿಧನ

Update: 2020-09-27 16:44 GMT

ಹೊಸದಿಲ್ಲಿ, ಸೆ. 27: ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತ ಜಸ್ವಂತ್ ಸಿಂಗ್ (82) ಹೃದಯಾಘಾತದಿಂದ ದಿಲ್ಲಿಯ ಸೇನಾ ಆಸ್ಪತ್ರೆ (ಆಲ್ ಆ್ಯಂಡ್ ಆರ್)ಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು.

ಜಸ್ವಂತ್ ಸಿಂಗ್ ಅವರು ಇಂದು ಬೆಳಗ್ಗೆ 6.55ಕ್ಕೆ ಹೃದಯಾಘಾತದಿಂದ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಅವರನ್ನು ಜೂನ್ 25ರಂದು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

2014 ಆಗಸ್ಟ್ 7ರಂದು ಜಸ್ವಂತ್ ಸಿಂಗ್ ತನ್ನ ನಿವಾಸದ ಸ್ನಾನದ ಕೊಠಡಿಯಲ್ಲಿ ಜಾರಿ ಬಿದ್ದಿದ್ದರು. ಅನಂತರ ಅವರು ಕೋಮಾಕ್ಕೆ ಜಾರಿದ್ದರು ಹಾಗೂ ದೀರ್ಘ ಕಾಲ ಚಿಕಿತ್ಸೆಯಲ್ಲಿ ಇದ್ದರು. ತೀವ್ರ ಅಸೌಖ್ಯದ ಹಿನ್ನೆಲೆಯಲ್ಲಿ 2020 ಜೂನ್ 25ರಂದು ಅವರನ್ನು ದಿಲ್ಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ರವಿವಾರ ಬೆಳಗ್ಗೆ ಅವರು ಹೃದಯಾಘಾತದಿಂದ ನಿಧನರಾದರು ಎಂದು ಹೇಳಿಕೆ ತಿಳಿಸಿದೆ.

ರಾಜಸ್ಥಾನದ ಬರ್ಮರ್ ಜಿಲ್ಲೆಯ ಜಸೋಲ್ ಗ್ರಾಮದಲ್ಲಿ 1938 ಜನವರಿಯಲ್ಲಿ ಜಸ್ವಂತ್ ಸಿಂಗ್ ಜನಿಸಿದರು. ಅಜ್ಮೀರ್‌ನ ಮೇಯೋ ಕಾಲೇಜು ಹಾಗೂ ಖಡ್ಕವಾಸ್ಲಾದ ಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಶಿಕ್ಷಣ ಪೂರೈಸಿದರು. ಅನಂತರ ಭಾರತೀಯ ಸೇನೆಯ ಅಶ್ವ ದಳವಾದ ‘ಸೆಂಟ್ರಲ್ ಇಂಡಿಯಾ ಹಾರ್ಸ್’ಗೆ ತನ್ನ 19ನೇ ವಯಸ್ಸಿನಲ್ಲಿ ಸೇರಿದರು. 1950ರಿಂದ 1965ರ ವರೆಗೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಅವರು ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದರು. ಅನಂತರ ಭಾರತದ ವಿದೇಶಾಂಗ ಸಚಿವ, ರಕ್ಷಣಾ ಸಚಿವ ಹಾಗೂ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ದೇಶದಲ್ಲಿ ಅತಿ ದೀರ್ಘ ಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದವರಲ್ಲಿ ಜಸ್ವಂತ್ ಸಿಂಗ್ ಕೂಡ ಒಬ್ಬರು.

ಬಿಜೆಪಿಯ ಸ್ಥಾಪನಾ (1980) ಸದಸ್ಯರಲ್ಲಿ ಜಸ್ವಂತ್ ಸಿಂಗ್ ಕೂಡ ಒಬ್ಬರು. 1980ರಲ್ಲಿ ಬಿಜೆಪಿ ಜಸ್ವಂತ್ ಸಿಂಗ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಅನಂತರ ಅವರು 2014ರ ವರೆಗೆ 5 ಬಾರಿ ಮೇಲ್ಮನೆಯ ಸದಸ್ಯರು ಹಾಗೂ 4 ಬಾರಿ ಕೆಳಮನೆಯ ಸದಸ್ಯರಾಗಿದ್ದರು ಹಾಗೂ 9 ಬಾರಿ ಸಂಸದರಾಗಿದ್ದರು.

ವಾಜಪೇಯಿ ಅವರಿಗೆ ಆಪ್ತರಾಗಿದ್ದ್ದ ಜಸ್ವಂತ್ ಸಿಂಗ್ ಅವರು 1996 ಮೇಯಲ್ಲಿ ಅಲ್ಪಾವಧಿಯ ವಾಜಪೇಯಿ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನಿಯೋಜಿತರಾ ಗಿದ್ದರು. ಅನಂತರ 1998 ಮೇಯಲ್ಲಿ ವಾಜಪೇಯಿ ಅವರ ಎರಡನೇ ಆಡಳಿತಾವಧಿಯಲ್ಲಿ ಹಣಕಾಸು, ವಿದೇಶಾಂಗ ಹಾಗೂ ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು.

1999ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ ಜಸ್ವಂತ್ ಸಿಂಗ್ ಅವರು ಕಠ್ಮಂಡುಗೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ ಸಂದರ್ಭ ಪ್ರಮುಖ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದ್ದರು.

ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಅಪಹರಿಸಿದ ಭಯೋತ್ಪಾದಕರು ವಿಮಾನದ ಪ್ರಯಾಣಿಕರನ್ನು ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಒತ್ತೆ ಸೆರೆ ಇರಿಸಿದ್ದರು. ಶ್ರೀನಗರದಲ್ಲಿ 1994ರಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದ್ದ ಭಯೋತ್ಪಾದಕ ಅಝರ್ ಮಸೂದ್ ಸೇರಿದಂತೆ ಪಾಕಿಸ್ತಾನದ ಮೂವರು ಕುಖ್ಯಾತ ಭಯೋತ್ಪಾದಕರನ್ನು ಭಾರತ ಸರಕಾರ ಬಿಡುಗಡೆ ಮಾಡುವಂತೆ ಅಪಹರಣಕಾರರು ಬೇಡಿಕೆ ಇರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಜಸ್ವಂತ್ ಸಿಂಗ್ ಅವರು ಭಯೋತ್ಪಾದಕ ಅಝರ್ ಮಸೂದ್‌ನೊಂದಿಗೆ ಕಂದಹಾರ್‌ಗೆ ವಿಮಾನದಲ್ಲಿ ತೆರಳಿದ್ದರು. ಇದರಿಂದ ಜಸ್ವಂತ್ ಸಿಂಗ್ ಹಾಗೂ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಅಜಿತ್ ದೋವಲ್ ತೀವ್ರ ಟೀಕೆ ಎದುರಿಸಿದ್ದರು.

2002 ಜುಲೈಯಲ್ಲಿ ವಾಜಪೇಯಿ ಸಂಪುಟದಲ್ಲಿ ಎರಡು ವರ್ಷಗಳ ಕಾಲ ಅವರು ವಿದೇಶಾಂಗ ವ್ಯವಹಾರಗಳ ಬದಲು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ತಾನು ನಿರ್ವಹಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಖಾತೆಯ ನಿರ್ವಹಣೆಯನ್ನು ಯಶ್ವಂತ್ ಸಿನ್ಹಾ ಅವರಿಗೆ ನೀಡಿ ಅವರ ಹಣಕಾಸು ಖಾತೆಯನ್ನು ತಾನು ನಿರ್ವಹಿಸಿದ್ದರು. 2004 ಮೇಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಅಲ್ಲಿಂದ 2009ರ ವರೆಗೆ ಅವರು ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದರು. ತನ್ನ ‘ಜಿನ್ಹಾ-ಇಂಡಿಯಾ, ಪಾರ್ಟಿಶನ್, ಇಂಡಿಪೆಂಡೆನ್ಸ್’ ಪುಸ್ತಕದಲ್ಲಿ ಜಿನ್ನಾರನ್ನು ಪ್ರಶಂಸಿಸಿದ್ದಾರೆ ಎಂದು ಪಕ್ಷದ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು 2009 ಆಗಸ್ಟ್‌ನಲ್ಲಿ ಪಕ್ಷದಿಂದ ಉಚ್ಛಾಟಿಸಿತ್ತು. ಅನಂತರ 2010ರಲ್ಲಿ ಮತ್ತೆ ಬಿಜೆಪಿಗೆ ಹಿಂದಿರುಗಿದ ಜಸ್ವಂತ್ ಸಿಂಗ್ ಲೋಕಸಭೆ ಚುನಾವಣೆಯಲ್ಲಿ ಡಾರ್ಜಿಲಿಂಗ್ ಕ್ಷೇತ್ರದಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದರು. 2012 ಆಗಸ್ಟ್‌ನಲ್ಲಿ ಸಿಂಗ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯನ್ನಾಗಿ ನಾಮ ನಿರ್ದೇಶಿಸಲಾಗಿತ್ತು. ಆದರೆ, ಅವರು ಯುಪಿಎಯ ಅಭ್ಯರ್ಥಿಯಾಗಿದ್ದ ಹಾಮಿದ್ ಅನ್ಸಾರಿಯಿಂದ ಪರಾಭವಗೊಂಡಿದ್ದರು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಬಿಜೆಪಿ ವಿರುದ್ಧ ಬಂಡಾಯ ಎದ್ದ ಅವರು ಬರ್ಮರ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಅವರನ್ನು ಮತ್ತೊಮ್ಮೆ ಪಕ್ಷದಿಂದ ಉಚ್ಚಾಟಿಸಿತ್ತು. ಆಗ ಅವರು ಬಿಜೆಪಿ ಅಭ್ಯರ್ಥಿ ಕರ್ನಲ್ ಸೋನಾರಾಮ್ ಚೌಧರಿ ಅವರಿಂದ ಪರಾಭವಗೊಂಡರು.

ಜಸ್ವಂತ್ ಸಿಂಗ್ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘‘ಜಸ್ವಂತ್ ಸಿಂಗ್ ಜಿ ಅವರು ಮೊದಲು ಯೋಧರಾಗಿದ್ದಾಗ ಹಾಗೂ ಅನಂತರ ರಾಜಕೀಯದೊಂದಿಗೆ ದೀರ್ಘ ಒಡನಾಟದ ಸಂದರ್ಭ ನಮ್ಮ ದೇಶಕ್ಕೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ’’ ಎಂದಿದ್ದಾರೆ.

‘‘ಹಿರಿಯ ಯೋಧ, ಪ್ರಮುಖ ಸಂಸದ, ಅಸಾಧಾರಣ ನಾಯಕ ಹಾಗೂ ಬುದ್ಧಿ ಜೀವಿ ಜಸ್ವಂತ್ ಸಿಂಗ್ ಅವರ ನಿಧನ ದುಃಖಕರ’’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News