ಬ್ರುಸೆಲೋಸಿಸ್: ಭಾರತಕ್ಕೆ ಚೀನಾದಿಂದ ಮತ್ತೊಂದು ಸಾಂಕ್ರಾಮಿಕದ ಭೀತಿ?

Update: 2020-09-27 05:06 GMT
ಸಾಂದರ್ಭಿಕ ಚಿತ್ರ (Pixabay)

ಹೊಸದಿಲ್ಲಿ: ಕೋವಿಡ್-19 ಸೋಂಕಿನಿಂದ ಜರ್ಜರಿತವಾಗಿರುವ ಭಾರತಕ್ಕೆ ಮತ್ತೊಂದು ಸಾಂಕ್ರಾಮಿಕ ಭೀತಿ ಎದುರಾಗಿದೆ. ದೇಶದಲ್ಲಿ ಬ್ರುಸೆಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಅಂಟುರೋಗ ನಿಧಾನವಾಗಿ ತನ್ನ ಕಬಂಧ ಬಾಹು ಚಾಚುತ್ತಿದೆ ಎಂದು ಹೇಳಲಾಗಿದೆ. ವಾಯವ್ಯ ಚೀನಾನದಲ್ಲಿ ಸಾವಿರಾರು ಮಂದಿಗೆ ಈಗಾಗಲೇ ಈ ಬ್ಯಾಕ್ಟೀರಿಯಾ ಸೋಂಕು ಹರಡಿದೆ.

ಚೀನಾದ ಗಾನ್ಸು ಪ್ರಾಂತ್ಯದ ಲಂಝೂವಿನಲ್ಲಿರುವ ರಾಷ್ಟ್ರೀಯ ಆರೋಗ್ಯ ಆಯೋಗದ ಅಂಕಿ ಅಂಶಗಳ ಪ್ರಕಾರ, 3245 ಮಂದಿಗೆ ಈಗಾಗಲೇ ಈ ಬ್ಯಾಕ್ಟೀರಿಯಾ ಸೋಂಕು ಹರಡಿದ್ದು, 1401 ಮಂದಿಗೆ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಇದುವರೆಗೆ ಯಾರೂ ಇದರಿಂದ ಮೃತಪಟ್ಟಿಲ್ಲ.

ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಈ ಸೋಂಕು ಈಗಾಗಲೇ ಭಾರತವನ್ನೂ ಪ್ರವೇಶಿಸಿದೆ ಎಂದು ಹೇಳಲಾಗಿದೆ.

ನೋವಲ್ ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಹೋಲಿಸಿದರೆ ಇದು ಮತ್ತಷ್ಟು ತೀವ್ರ ಸಾಂಕ್ರಾಮಿಕವಾಗಬಲ್ಲದು ಎಂಬ ಭೀತಿಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಬ್ರುಸೆಲ್ಲಾ ತಳಿಯ ಬ್ಯಾಕ್ಟೀರಿಯಾ ಸಮೂಹವಾದ ಬ್ರುಸೆಲೋಸಿಸ್, ಮನುಷ್ಯರು ಮತ್ತು ಪ್ರಾಣಿಗಳಿಗೂ ಧಕ್ಕೆ ಉಂಟುಮಾಡಬಲ್ಲದು.

ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳ ದೇಹದ್ರವದ ನೇರ ಸಂಪರ್ಕದಿಂದ ಇದು ಹರಡುತ್ತದೆ. ಕಚ್ಚಾ ಅಥವಾ ಪಾಶ್ಚರೀಕರಣಕ್ಕೆ ಒಳಗಾಗದ ಹೈನು ಉತ್ಪನ್ನಗಳನ್ನು ಸೇವಿಸುವುದರಿಂದ ಹಾಗೂ ಮಲಿನ ಗಾಳಿಯನ್ನು ಆಘ್ರಾಣಿಸುವುದರಿಂದಲೂ ಇದು ಹರಡುತ್ತದೆ. ಸಿಡಿಸಿ ಪ್ರಕಾರ, ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವ ಸಾಧ್ಯತೆ ವಿರಳ. ಮನುಷ್ಯರಿಗೆ ಹೆಚ್ಚಾಗಿ ಸೋಂಕು ತಗುಲುವ ಸಾಧ್ಯತೆ ಇರುವುದು ಆಹಾರದ ಮೂಲಕ ಹಾಗೂ ಬ್ಯಾಕ್ಟೀರಿಯಾ ಇರುವ ಗಾಳಿಯ ಉಸಿರಾಟದಿಂದ. ಆದರೆ ಲೈಂಗಿಕ ಸಂಪರ್ಕದ ಮೂಲಕವೂ ಇದು ಹರಡುವ ಸಾಧ್ಯತೆ ಇದ್ದು, ಸ್ತನ್ಯಪಾನದ ಮೂಲಕ ತಾಯಿಯಿಂದ ಮಗುವಿಗೆ ಹರಡಬಲ್ಲದು. ಚರ್ಮದ ಮೇಲಾಗುವ ತೀವ್ರ ಗಾಯ ಕೂಡಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ.

ಝೊಂಗುಮು ಲಾಝೋಹ್ ಬಯಾಲಾಜಿಕಲ್ ಫಾರ್ಮಸ್ಯೂಟಿಕಲ್ ಫ್ಯಾಕ್ಟರಿಯಲ್ಲಿ ಜುಲೈ- ಆಗಸ್ಟ್ ನಲ್ಲಿ ಸಂಭವಿಸಿದ ಸೋರಿಕೆಯಿಂದ ಇದು ಹರಡಿದೆ ಎನ್ನಲಾಗಿದೆ. ಪ್ರಾಣಿಗಳಿಗೆ ಇರುವ ಬ್ರುಸೆಲ್ಲಾ ಲಸಿಕೆ ಉತ್ಪಾದಿಸುವ ಫ್ಯಾಕ್ಟರಿಯಲ್ಲಿ ಅವಧಿಮೀರಿದ ಸೋಂಕುನಾಶಕಗಳನ್ನು ಮತ್ತು ಸ್ಯಾನಿಟೈಸರ್‍ಗಳನ್ನು ಬಳಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಇದು ತ್ಯಾಜ್ಯ ಅನಿಲದಲ್ಲಿ ಬ್ಯಾಕ್ಟೀರಿಯಾ ಸೋರಿಕೆಗೆ ಕಾರಣವಾಯಿತು ಎನ್ನಲಾಗಿದೆ.

ಜ್ವರ, ಕೀಲು ನೋವು, ಸುಸ್ತು, ಹಸಿವಿಲ್ಲದಿರುವಿಕೆ, ತಲೆನೋವು ಹಾಗೂ ಬೆವರು ಬ್ರುಸೆಲ್ಲೋಸಿಸ್ ರೋಗದ ಮುಖ್ಯ ಲಕ್ಷಣಗಳು. ಸೋಂಕು ತಗುಲಿದ ಹಲವು ದಿನಗಳ ಬಳಿಕ ರೋಗಲಕ್ಷಣ ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News