ಆರ್ಮೇನಿಯ, ಅಝರ್‌ಬೈಜಾನ್ ನಡುವೆ ಯುದ್ಧ ಸ್ಫೋಟ

Update: 2020-09-27 16:31 GMT

ಯೆರೆವಾನ್ (ಆರ್ಮೇನಿಯ), ಸೆ. 27: ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ಸೇನೆಗಳ ನಡುವೆ ವಿವಾದಾಸ್ಪದ ನಗೊರ್ನೊ-ಕರಬಾಖ್ ವಲಯದಲ್ಲಿ ರವಿವಾರ ಸಂಘರ್ಷ ಸ್ಫೋಟಿಸಿದೆ. ಎರಡೂ ಕಡೆಗಳಲ್ಲಿ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಝರ್‌ಬೈಜಾನ್ ವಾಯು ಮತ್ತು ಫಿರಂಗಿ ದಾಳಿ ನಡೆಸಿದೆ ಎಂದು ಆರ್ಮೇನಿಯ ಆರೋಪಿಸಿದೆ. ಬಳಿಕ ಅದು ದೇಶದಲ್ಲಿ ಸೇನಾಡಳಿತವನ್ನು ಘೋಷಿಸಿತು ಹಾಗೂ ಸೇನಾ ಜಮಾವಣೆಗೆ ಆದೇಶ ನೀಡಿತು.

ಸಂಘರ್ಷಕ್ಕೆ ಆರ್ಮೇನಿಯವನ್ನು ದೂರಿರುವ ಅಝರ್‌ಬೈಜಾನ್, ಗಡಿಯಲ್ಲಿ ನಡೆಯುತ್ತಿರುವ ಶೆಲ್ ದಾಳಿಗಳಿಗೆ ತಾನು ಪ್ರತಿಕ್ರಿಯೆ ಮಾತ್ರ ನೀಡುತ್ತ್ತಿದ್ದೇನೆ ಎಂದು ಹೇಳಿದೆ.

ಎರಡು ದೇಶಗಳ ನಡುವೆ ನಗೊರ್ನೊ-ಕರಬಾಖ್ ಎಂಬ ವಲಯದ ಒಡೆತನದ ವಿಚಾರದಲ್ಲಿ ಸುದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ಸಂಘರ್ಷವು ಇತ್ತೀಚಿನ ತಿಂಗಳುಗಳಲ್ಲಿ ಸ್ಫೋಟಿಸಿದೆ.

ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳೆರಡೂ ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದವು. 1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ಬಳಿಕ ಅವುಗಳು ಸ್ವತಂತ್ರ ದೇಶಗಳಾದವು.

ನಗೊರ್ನೊ-ಕರಬಾಖ್‌ಗಾಗಿ ಎರಡು ದೇಶಗಳು ಅಂದಿನಿಂದಲೂ ಸಂಘರ್ಷದಲ್ಲಿ ತೊಡಗಿವೆ. ಮೂರು ದಶಕಗಳಾದರೂ ವಿವಾದ ಬಗೆಹರಿದಿಲ್ಲ.

ಈ ವಲಯವು ಅಝರ್‌ಬೈಜಾನ್‌ನ ಭಾಗವಾಗಿದೆ, ಆದರೆ ಆರ್ಮೇನಿಯನ್ ಜನಾಂಗೀಯರ ನಿಯಂತ್ರಣದಲ್ಲಿದೆ ಎಂಬುದಾಗಿ ಅಂತರ್‌ರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿದೆ.

► ರಕ್ತಸಿಕ್ತ ಇತಿಹಾಸ

1990ರ ದಶಕದಲ್ಲಿ ನಡೆದ ಯುದ್ಧದಲ್ಲಿ ಆರ್ಮೇನಿಯನ್ ಜನಾಂಗೀಯ ಪ್ರತ್ಯೇಕತಾವಾದಿಗಳು ನಗೋರ್ನಿ-ಕರಬಾಖ್ ವಲಯವನ್ನು ಅಝರ್‌ಬೈಜಾನ್‌ನಿಂದ ವಶಪಡಿಸಿಕೊಂಡಿದ್ದರು. ಅಂದಿನ ಯುದ್ಧದಲ್ಲಿ 30,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

2016ರ ಎಪ್ರಿಲ್‌ನಲ್ಲಿ ಅಲ್ಲಿ ಮತ್ತೊಮ್ಮೆ ಭೀಕರ ಸಂಘರ್ಷ ನಡೆದಿದ್ದು, ಸುಮಾರು 110 ಮಂದಿ ಹತರಾಗಿದ್ದರು. ನಗೋರ್ನಿ-ಕರಬಾಖ್ ಭೂಭಾಗಕ್ಕಾಗಿ ಈ ವರ್ಷದ ಜುಲೈ ತಿಂಗಳಲ್ಲೂ ಸಂಘರ್ಷ ನಡೆದಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News