ಕೇಂದ್ರ ಪೊಲೀಸ್ ಪಡೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 36 ಸಾವಿರಕ್ಕೇರಿಕೆ: 128 ಮಂದಿ ಸಾವು

Update: 2020-09-27 18:05 GMT

ಹೊಸದಿಲ್ಲಿ, ಸೆ. 27: ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಪೊಲೀಸ್ ಪಡೆಗಳ ಕೊರೋನ ಸೋಂಕಿತ ಸಿಬ್ಬಂದಿಯ ಸಂಖ್ಯೆ 36,000ಕ್ಕೆ ಏರಿಕೆಯಾಗಿದೆ. ಅಲ್ಲದೆ ಕೊರೋನ ಸೋಂಕಿನಿಂದ 128 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಇತ್ತೀಚೆಗಿನ ದತ್ತಾಂಶ ತಿಳಿಸಿದೆ.

ಕೇಂದ್ರ ಪೊಲೀಸ್ ಪಡೆಯ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಇಂಡೋ-ಟಿಬೇಟನ್ ಗಡಿ ಪೊಲೀಸ್ (ಐಟಿವಿಬಿಪಿ), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್‌ಎಸ್‌ಜಿ) ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್)ಗಳಲ್ಲಿ ಕೊರೋನ ಸೋಂಕು ಹರಡಿದೆ.

 ಈ ಪಡೆಗಳಲ್ಲಿ ಇದುವರೆಗೆ 36,000 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6,646 ಸಕ್ರಿಯ ಪ್ರಕರಣಗಳು. ಉಳಿದ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ದತ್ತಾಂಶ ತಿಳಿಸಿದೆ.

 2.5 ಲಕ್ಷ ಸಿಬ್ಬಂದಿ ಇರುವ ದೇಶದ ಅತಿ ದೊಡ್ಡ ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನಲ್ಲಿ ಕೊರೋನ ಸೋಂಕಿನ ಗರಿಷ್ಠ 10,636 ಪ್ರಕರಣಗಳು ದಾಖಲಾಗಿವೆ. ಅನಂತರ ಅತಿ ದೊಡ್ಡ ಅರೆ ಸೇನಾ ಪಡೆಯಾದ ಸಿಆರ್‌ಪಿಎಫ್‌ನಲ್ಲಿ 10,602 ಪ್ರಕರಣಗಳು ಹಾಗೂ ಸಿಐಎಸ್‌ಎಫ್‌ನಲ್ಲಿ 6,466 ಪ್ರಕರಣಗಳು ದಾಖಲಾಗಿವೆ. ಐಟಿಬಿಪಿಯಲ್ಲಿ 3,845 ಪ್ರಕರಣಗಳು, ಎಸ್‌ಎಸ್‌ಬಿಯಲ್ಲಿ 3,684 ಪ್ರಕರಣಗಳು, ಎನ್‌ಡಿಆರ್‌ಎಫ್ 514 ಪ್ರಕರಣಗಳು ಹಾಗೂ ಎನ್‌ಎಸ್‌ಜಿಯಲ್ಲಿ 250 ಪ್ರಕರಣಗಳು ದಾಖಲಾಗಿವೆ.

ಈ ಎಲ್ಲ ಪಡೆಗಳಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ಪಡೆಗಳ ಒಟ್ಟು 128 ಯೋಧರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನ ಸೋಂಕಿನಿಂದ ಅನುಕ್ರಮವಾಗಿ ಸಿಆರ್‌ಪಿಎಫ್‌ನಲ್ಲಿ 52, ಬಿಎಸ್‌ಎಫ್‌ನಲ್ಲಿ 29, ಸಿಐಎಸ್‌ಎಫ್‌ನಲ್ಲಿ 28, ಐಟಿಬಿಪಿ ಹಾಗೂ ಎಸ್‌ಎಸ್‌ಬಿಯಲ್ಲಿ ತಲಾ 9 ಸಾವು ಸಂಭವಿಸಿದೆ. ಎನ್‌ಡಿಆರ್‌ಎಫ್‌ನಲ್ಲಿ 1 ಸಾವು ಸಂಭವಿಸಿದೆ. ಕೊರೋನ ಸೋಂಕು ಹೆಚ್ಚುತ್ತಿದ್ದರೂ ಈ ಪಡೆಗಳು ಕರ್ತವ್ಯದಿಂದ ಹಿಂದೆ ಸರಿದಿಲ್ಲ. ರಜೆಯ ಬಳಿಕ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತರನ್ನು ವೈದ್ಯಕೀಯ ಚಿಕಿತ್ಸೆ ಹಾಗೂ ಏಸೋಲೇಶನ್‌ಗೆ ಕಳುಹಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News