ದೇಶದಲ್ಲಿ ಹೊಸ ಪ್ರಕರಣ ಇಳಿಕೆ ನಡುವೆಯೂ 60 ಲಕ್ಷಕ್ಕೇರಿದ ಕೊರೋನ

Update: 2020-09-28 04:01 GMT

ಹೊಸದಿಲ್ಲಿ, ಸೆ.28: ದೇಶದಲ್ಲಿ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ನಡುವೆಯೇ ಒಟ್ಟು ಸೋಂಕಿತರ ಸಂಖ್ಯೆ 60 ಲಕ್ಷಕ್ಕೇರಿದೆ. ಈ ಪೈಕಿ 50 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ಇಡೀ ವಿಶ್ವದಲ್ಲಿ ಅಮೆರಿಕ ಹೊರತುಪಡಿಸಿದರೆ ಇಷ್ಟೊಂದು ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ಏಕೈಕ ದೇಶ ಭಾರತ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 50 ಲಕ್ಷದಿಂದ 60 ಲಕ್ಷಕ್ಕೇರಲು 12 ದಿನಗಳು ತಗಲಿವೆ. ದೇಶದಲ್ಲಿ ಕಳೆದ 11 ದಿನಗಳಲ್ಲಿ 10 ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ.

ಜಾಗತಿಕವಾಗಿ ಒಟ್ಟು ಪ್ರಕರಣಗಳ ಸಂಖ್ಯೆ 3,29,25,668ಕ್ಕೇರಿದೆ ಎಂದು ಅಮೆರಿಕದ ಜಾನ್ಸ್ ಹಾಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಲಕ್ಷದ ಸನಿಹಕ್ಕೆ ಬಂದಿದ್ದು, 9,95,414 ಮಂದಿ ಬಲಿಯಾಗಿದ್ದಾರೆ.

ಈ ಮಧ್ಯೆ ಕೊರೋನ ವೈರಸ್ ಸಾಂಕ್ರಾಮಿಕದ ಎರಡನೇ ಅಲೆ ವಿಶ್ವದ ಹಲವೆಡೆಗಳಲ್ಲಿ ಅಪ್ಪಳಿಸಿದ್ದು, ಹಲವು ದೇಶಗಳು ಮತ್ತೆ ಲಾಕ್‌ಡೌನ್ ಹೇರಿವೆ. ನೆರೆ ರಾಜ್ಯವಾದ ಕೇರಳ ಕೂಡಾ ಈ ಬಗ್ಗೆ ಜನತೆಗೆ ಎಚ್ಚರಿಕೆ ನೀಡಿದ್ದು, "ಜನ ಸೂಕ್ತ ಶಿಷ್ಟಾಚಾರಗಳನ್ನು ಪಾಲಿಸದಿದ್ದರೆ, ಮತ್ತೆ ಲಾಕ್‌ಡೌನ್ ಹೇರಿಕೆ ಅನಿವಾರ್ಯವಾಗುತ್ತದೆ" ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.

ದೇಶದಲ್ಲಿ ಸಾಂಕ್ರಾಮಿಕ ಹರಡುವಿಕೆ ದರ 0.9ಕ್ಕೆ ಇಳಿದಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮೆಥಮ್ಯಾಟಿಕಲ್ ಸೈನ್ಸಸ್ ಅಂದಾಜಿಸಿದ್ದರೂ, ಮುಂಬೈ, ಪುಣೆ, ಚೆನ್ನೈ, ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತವೆ ಎನ್ನುವುದನ್ನು ಭವಿಷ್ಯದ ಪ್ರಗತಿ ಅವಲಂಬಿಸಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವುದು ಕಳವಳಕಾರಿ ಎಂದು ಸಂಶೋಧನಾ ಸಂಸ್ಥೆಯೊಂದರ ಮುಖ್ಯಸ್ಥ ಸಿತಾಬ್ರಾ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News