ಐಪಿಎಲ್: ಪೂರನ್ ಅದ್ಭುತ ಫೀಲ್ಡಿಂಗ್‌ಗೆ ಸಚಿನ್, ಸೆಹ್ವಾಗ್ ಶ್ಲಾಘನೆ

Update: 2020-09-28 08:50 GMT

ಶಾರ್ಜಾ, ಸೆ.28: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ ವಿರುದ್ಧ ಪಂದ್ಯದಲ್ಲಿ ಸೋತ ಹೊರತಾಗಿಯೂ ಇಬ್ಬರು ಆಟಗಾರರ ಪ್ರದರ್ಶನದಿಂದ ಗಮನ ಸೆಳೆದಿದೆ. ಮಾಯಾಂಕ್ ಅಗರ್ವಾಲ್ 45 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರೆ,  ನಿಕೋಲಸ್ ಪೂರನ್ ಅಮೋಘ ಫೀಲ್ಡಿಂಗ್ ಎಲ್ಲರನ್ನು ಬೆರಗುಗೊಳಿಸಿತು.

ಪೂರನ್ ಫೀಲ್ಡಿಂಗ್‌ಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಸಹಿತ ಹಲವು ಮಾಜಿ ಆಟಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಪಂಜಾಬ್ ಸ್ಪಿನ್ನರ್ ಮುರುಗನ್ ಅಶ್ವಿನ್ ಎಸೆತದಲ್ಲಿ ಸಂಜು ಸ್ಯಾಮ್‌ಸನ್ ಸಿಕ್ಸರ್‌ನತ್ತ ಚೆಂಡನ್ನು ಅಟ್ಟಿದರು. ಡೀಪ್ ಮಿಡ್ ವಿಕೆಟ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಪೂರನ್ ಬೌಂಡರಿ ಲೈನ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಮೇಲಕ್ಕೆ ಹಾರಿ ತಡೆದು ಮೈದಾನಕ್ಕೆ ಎಸೆದರು. ರಾಜಸ್ಥಾನ ತಂಡ ಎರಡು ರನ್ ಗಳಿಸಿತು. ಪೂರನ್ ಪ್ರಯತ್ನದಿಂದ ಪಂಜಾಬ್ ತಂಡ ನಾಲ್ಕು ರನ್ ಉಳಿಸಿಕೊಂಡಿತು.

"ಇದು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ರನ್ ಉಳಿತಾಯ. ಸುಲಭವಾಗಿ ನಂಬಲಾಗದ ಫೀಲ್ಡಿಂಗ್'' ಎಂದು ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

 ನಿಜವಾಗಿಯೂ ಇದು ಅತ್ಯುತ್ತಮ ರನ್ ಉಳಿತಾಯ ಎಂಬ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಪೂರನ್ ನೀವು ಅದನ್ನು ಹೇಗೆ ಮಾಡಿದ್ದೀರಿ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಪೂರನ್ ಫೀಲ್ಡಿಂಗ್ ಗೆ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಎದ್ದು ನಿಂತು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News