ಎನ್‍ ಆರ್ ಸಿ ಬವಣೆ ಕುರಿತ ಮೊದಲ ಚಿತ್ರ 'ನಾಯ್ಸ್ ಆಫ್ ಸೈಲೆನ್ಸ್' ಈ ವರ್ಷಾಂತ್ಯದಲ್ಲಿ ಬಿಡುಗಡೆ

Update: 2020-09-28 10:09 GMT

ಹೊಸದಿಲ್ಲಿ: ಅಸ್ಸಾಂನಲ್ಲಿ ಜಾರಿಗೊಳಿಸಲಾದ ವಿವಾದಾತ್ಮಕ ಎನ್‍ ಆರ್ ಸಿಸಿ ಕುರಿತಾದ ಮೊದಲ ಬಾಲಿವುಡ್ ಚಿತ್ರವೆಂದು ಬಣ್ಣಿಸಲಾಗಿರುವ 'ನಾಯ್ಸ್ ಆಫ್ ಸೈಲೆನ್ಸ್' ಈ ವರ್ಷಾಂತ್ಯದೊಳಗೆ ಒಟಿಟಿ ಪ್ಲಾಟ್‍ಫಾರ್ಮ್ ಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಬಾಲಿವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಿತ್ರವೊಂದನ್ನು ಸಂಪೂರ್ಣವಾಗಿ ತ್ರಿಪುರಾದಲ್ಲಿ ಚಿತ್ರೀಕರಿಸಲಾಗಿದೆ.

ಎನ್‍ಆರ್‍ಸಿಯಿಂದ ಹೊರಗುಳಿದಿರುವ ಅಸ್ಸಾಂ ರಾಜ್ಯದ ಲಕ್ಷಾಂತರ ಜನರ ಬವಣೆಗಳನ್ನು ಬಿಂಬಿಸುವ ಏಕೈಕ ಉದ್ದೇಶದಿಂದ ಈ ಚಿತ್ರವನ್ನು ತಯಾರಿಸಲಾಗಿದೆ ಎಂದು ನಿರ್ದೇಶಕ ಸೈಫ್ ಬೈದ್ಯ ಹೇಳುತ್ತಾರೆ. ಸೇನೆಯ ಅಧಿಕಾರಿಯೊಬ್ಬರ ಮಗನಾಗಿರುವ ತಮ್ಮ ಮಾಜಿ ಸಹಾಯಕ ನಿರ್ದೇಶಕರೊಬ್ಬರ ಹೆಸರನ್ನು ಎನ್‍ಆರ್‍ಸಿಯಿಂದ ಹೊರಗಿಟ್ಟ ನಂತರ ತಮಗೆ ಈ ಚಿತ್ರ ನಿರ್ಮಿಸುವ ಯೋಚನೆ ಬಂತು ಎಂದೂ ಅವರು ತಿಳಿಸಿದ್ದಾರೆ.

"ಕೋರ್ಟ್ ಗೆ ಹಾಜರಾಗಲು ಆದಿತ್ಯಗೆ ಪ್ರತಿ ತಿಂಗಳು ಅಸ್ಸಾಂಗೆ ಹೋಗಬೇಕಿತ್ತು. ಆತನ ತಂದೆ ಸೇವೆಯಲ್ಲಿರುವ ಸೇನಾಧಿಕಾರಿಯಾಗಿರುವ ಹೊರತಾಗಿಯೂ ಆದಿತ್ಯ ಹಾಗೂ ಆತನ ತಾಯಿಯ ಹೆಸರು ಎನ್‍ಆರ್‍ಸಿ ಪಟ್ಟಿಯಲ್ಲಿರಲಿಲ್ಲ, ಇಂತಹ ಜನರ ಕಷ್ಟವನ್ನು ಎಲ್ಲರೆದುರು ಇಡುವುದು ನನ್ನ ಬಯಕೆಯಾಗಿದೆ,'' ಎಂದು ಅವರು ಹೇಳಿದ್ದಾರೆ.

ತ್ರಿಪುರಾದ ಸುಮಾರು 20 ಕಡೆಗಳಲ್ಲಿ ಈ ವರ್ಷದ ಫೆಬ್ರವರಿಯಲ್ಲಿ 28 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿತ್ತು. ಚಿತ್ರ ತಂಡದಲ್ಲಿ 54 ಕಲಾವಿದರಿದ್ದು ಹೆಚ್ಚಿನವರು ತ್ರಿಪುರಾದವರಾಗಿದ್ಧಾರೆ.

ಎನ್‍ಆರ್‍ಸಿ ಪಟ್ಟಿಯಿಂದ ಹೊರಗುಳಿದ ದಂಪತಿ ಹಾಗೂ ತನ್ನ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಬರುವ ರೋಹಿಂಗ್ಯ ಮುಸ್ಲಿಂ ಯುವತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.

ಹಿಟ್ ಚಿತ್ರಗಳಾದ 'ಗ್ಯಾಂಗ್ಸ್ ಆಫ್ ವಸ್ಸೇಯ್ಪುರ್', 'ಕೇದಾರನಾಥ' ನಿರ್ಮಿಸಿರುವ ಜಾರ್ ಪಿಕ್ಚರ್ಸ್ ಸಂಸ್ಥೆಯ ಅಜಯ್ ರಾಯ್ ಅವರ ಸೋದರ ವಿನಯ್ ಜಿ ರಾಯ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News