ಉವೈಸಿಯ ಪಕ್ಷ ಬಿಜೆಪಿಯ ಗೆಲುವಿಗೆ ಕಾರಣವಾಗುವಷ್ಟು ಜಾತ್ಯತೀತ ಮತಗಳನ್ನು ದೋಚುತ್ತಿದೆಯೇ?

Update: 2020-09-28 11:50 GMT

ಹೊಸದಿಲ್ಲಿ, ಸೆ.28: ಅಸದುದ್ದೀನ್ ಉವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಸ್ಥಾನಗಳಲ್ಲಿ ಶೇ. 20ರಷ್ಟು ಅಂದರೆ ಸುಮಾರು 50 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಈ ಬಾರಿ ರಾಜ್ಯ ರಾಜಕೀಯದಲ್ಲಿ ತನ್ನ ಛಾಪನ್ನು ಮೂಡಿಸುವ ಆಶಯವನ್ನು ಎಐಎಂಐಎಂ ಹೊಂದಿದೆ.

ಉವೈಸಿಯವರ ಪ್ರಕಟಣೆಯ ಬೆನ್ನಲ್ಲೇ ಪ್ರತಿಪಕ್ಷ ಆರ್‌ಜೆಡಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಎಐಎಂಐಎಂ ಬಿಜೆಪಿಯ ‘ಬಿ’ ತಂಡವಾಗಿದೆ ಮತ್ತು ಜಾತ್ಯತೀತ ಮತಗಳನ್ನು ವಿಭಜಿಸುವ ಮೂಲಕ ಅದಕ್ಕೆ ನೆರವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಎಐಎಂಐಎಂಗೆ ಬಿಜೆಪಿಯ ‘ಬಿ’ ತಂಡ ಎಂದು ಹಣೆಪಟ್ಟಿ ಹಚ್ಚುವುದು ಇದೇ ಮೊದಲ ಸಲವೇನಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಈ ಹಿಂದೆಯೂ ಉವೈಸಿ ವಿರುದ್ಧ ಇಂತಹ ಆರೋಪಗಳನ್ನು ಮಾಡಿದ್ದಾರೆ.

ಎಐಎಂಐಎಂ ಪ್ರತಿಬಾರಿ ಹೊಸ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಈ ಆರೋಪ ಇನ್ನಷ್ಟು ಗಟ್ಟಿಯಾಗಿ ಕೇಳಿಬರುತ್ತದೆ. ಆದರೆ ಕಳೆದ ಆರು ವರ್ಷಗಳಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಎಐಎಂಐಎಂ ಸ್ಪರ್ಧಿಸಿದ್ದ ಸ್ಥಾನಗಳ ವಿಶ್ಲೇಷಣೆಯು ಪಕ್ಷವು ತಥಾಕಥಿತ ಜಾತ್ಯತೀತ ಪಕ್ಷಗಳ ಮತಗಳಿಗೆ ಕನ್ನ ಹಾಕುತ್ತಿದೆ ಅಥವಾ ಬಿಜೆಪಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂಬ ವಾದದಲ್ಲಿ ಹೇಳಿಕೊಳ್ಳುವಂತಹ ತಿರುಳಿಲ್ಲ ಎನ್ನುವುದನ್ನು ತೋರಿಸಿದೆ.

ಎಐಎಂಐಎಂ ತೆಲಂಗಾಣ/ಆಂಧ್ರಪ್ರದೇಶದ ಹೊರಗೆ ಮೊದಲ ಬಾರಿಗೆ 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತು ಮತ್ತು 288 ಸ್ಥಾನಗಳ ಪೈಕಿ 24 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಔರಂಗಾಬಾದ್ ಸೆಂಟ್ರಲ್ ಮತ್ತು ಮುಂಬೈನ ಬೈಕುಲಾ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಪಕ್ಷವು ನಾಂದೇಡ್ ದಕ್ಷಿಣ ಮತ್ತು ಭಿವಂಡಿ ಪಶ್ಚಿಮ ಕ್ಷೇತ್ರಗಳಲ್ಲಿ ಮಾತ್ರ ಜಾತ್ಯತೀತ ಪಕ್ಷಗಳ ಮತಗಳಿಗೆ ಕನ್ನ ಹಾಕಿತ್ತು. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ 44 ಸ್ಥಾನಗಳಿಗೆ ಪಕ್ಷವು ಸ್ಪರ್ಧಿಸಿತ್ತು. ಹಿಂದೆ ಗೆದ್ದಿದ್ದ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ವಿಫಲಗೊಂಡಿದ್ದರೂ ಎರಡು ಹೊಸ ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರಲ್ಲಿ ಐದು ಲಕ್ಷಗಳಿದ್ದ ಪಕ್ಷದ ಮತಗಳಿಕೆ 2019ರಲ್ಲಿ 7.5 ಲಕ್ಷಕ್ಕೇರಿತ್ತು. 2019ರಲ್ಲಿ ಏಳು ಕ್ಷೇತ್ರಗಳಲ್ಲಿ ಎಐಎಂಐಎಂಗೆ ಬಿದ್ದಿದ್ದ ಮತಗಳ ಪ್ರಮಾಣ ಶಿವಸೇನೆ ಅಥವಾ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿತ್ತು. ಪಕ್ಷವು ಸ್ಪರ್ಧಿಸಿದ್ದ ಇತರ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯಂತಹ ಬಿಜೆಪಿಯೇತರ ಮತ್ತು ಶಿವಸೇನೆಯೇತರ ಪಕ್ಷಗಳು ಗೆದ್ದಿದ್ದವು. ಎಐಎಂಐಎಂ ಜಾತ್ಯತೀತ ಪಕ್ಷಗಳಿಗೆ ತೊಡಕಾಗಿರಲಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.

ಎಐಎಂಐಎಂ 2017ರ ಉತ್ತರ ಪ್ರದೇಶ ಚುನಾವಣೆಗಳಲ್ಲಿ ತನ್ನ 38 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಒಬ್ಬರೂ ಗೆದ್ದಿರಲಿಲ್ಲ. ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಜಾತ್ಯತೀತ ಪಕ್ಷಗಳ ವಿಭಜನೆಗೆ ಅದು ಕಾರಣವಾಗಿತ್ತು. 2015ರ ಬಿಹಾರ ವಿಧಾನಭಾ ಚುನಾವಣೆಗಳಲ್ಲಿ ಪಕ್ಷವು ಆರು ಸ್ಥಾನಗಳಿಗೆ ಸ್ಪರ್ಧಿಸಿತ್ತು ಮತ್ತು ಈ ಪೈಕಿ ಐದು ಕ್ಷೇತ್ರಗಳು ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಸೀಮಾಂಚಲ ಪ್ರದೇಶಕ್ಕೆ ಸೇರಿದ್ದವು. ಆದರೆ ಅದರ ಎಲ್ಲ ಅಭ್ಯರ್ಥಿಗಳು ಸೋಲನ್ನಪ್ಪಿದ್ದರು. ಇಲ್ಲಿಯೂ ಪಕ್ಷವು ಜಾತ್ಯತೀತ ಮತಗಳಿಗೆ ಕನ್ನ ಹಾಕಿರಲಿಲ್ಲ.

2019 ಡಿಸೆಂಬರ್‌ನಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ 16 ಕ್ಷೇತ್ರಗಳಲ್ಲಿ ಪಕ್ಷವು ಸ್ಪರ್ಧಿಸಿತ್ತಾದರೂ ಯಾವುದೇ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಗಳಿಸಲು ಅದಕ್ಕೆ ಸಾಧ್ಯವಾಗಿತ್ತು. ಆದರೂ ಎಐಎಂಐಎಂ ಜಾತ್ಯತೀತ ಮತಗಳನ್ನು ಕಬಳಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಎಲ್ಲ ವರ್ಷಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸೋಲುಗಳಲ್ಲಿ ಎಐಎಂಐಎಂ ಗಮನೀಯ ಪಾತ್ರ ವಹಿಸಿತ್ತು ಎನ್ನುವುದನ್ನು ಅಂಕಿಸಂಖ್ಯೆಗಳು ತೋರಿಸುತ್ತಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 48 ಸ್ಥಾನಗಳಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡಿತ್ತಾದರೂ ಔರಂಗಾಬಾದ್‌ನಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅಘಾಡಿ ಎಲ್ಲ 47 ಕ್ಷೇತ್ರಗಳಲ್ಲಿ ಸೋತಿದ್ದರೆ ಔರಂಗಾಬಾದ್‌ನಲ್ಲಿ ಎಐಎಂಐಎಂ ಅಭ್ಯರ್ಥಿ ಇಮ್ತಿಯಾಝ್ ಜಲೀಲ್ ಗೆದ್ದಿದ್ದರು. ಮಾಜಿ ಮುಖ್ಯಮಂತ್ರಿ ಏ.ಆರ್ ಅಂಟುಳೆಯವರು 2004ರಲ್ಲಿ ರಾಯಗಡದಿಂದ ಸಂಸದರಾಗಿ ಆಯ್ಕೆಯಾದ ನಂತರ 15 ವರ್ಷಗಳಲ್ಲಿ ರಾಜ್ಯದಿಂದ ಇದೇ ಮೊದಲ ಬಾರಿಗೆ ಸಂಸತ್ತಿಗೆ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿದ್ದರು. ಜಲೀಲ್ ಔರಂಗಾಬಾದ್‌ನ ಮೊದಲ ಮುಸ್ಲಿಂ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2019ರಲ್ಲಿ ಬಿಹಾರದ ಕಿಶನಗಂಜ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಗೆಲುವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷದಲ್ಲಿ ವಿಶ್ವಾಸ ಮೂಡಿಸಿದೆ ಎನ್ನುತ್ತಾರೆ ಎಐಎಂಐಎಂ ನಾಯಕರು. ಅಲ್ಲಿ ಎಐಎಂಐಎಂ ಅಭ್ಯರ್ಥಿ ಕಮರುಲ್ ಹೋಡಾ 10,000ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು.

ಹಿಂದಿ ಭಾಷಿಕ ಪ್ರದೇಶಗಳಲ್ಲಿ ಮುಸ್ಲಿಮರಲ್ಲಿಯ ಅತೃಪ್ತಿಯ ಭಾವನೆ ನಿಧಾನವಾಗಿ, ಆದರೆ ಖಂಡಿತವಾಗಿಯೂ ಎಐಎಂಐಎಂ ಪಕ್ಷಕ್ಕೆ ಲಾಭವನ್ನು ನೀಡಲಿದೆ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಬದ್ರಿನಾರಾಯಣ.

ಮುಸ್ಲಿಮರ ಒಂದು ವರ್ಗವನ್ನು ತಾರತಮ್ಯದ ಮತ್ತು ಅತೃಪ್ತಿಯ ಭಾವನೆ ಕಾಡುತ್ತಿದೆ. ಎಐಎಂಐಎಂ ಬಿಜೆಪಿಯ ವಿರುದ್ಧದ ಈ ಭಾವನೆಯ ಲಾಭವನ್ನು ಪಡೆಯಲಿದೆ. ಆದರೆ ಅದು ಹೆಚ್ಚಿನ ಕ್ಷೇತ್ರಗಳಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿರಲಿದೆ. ಈಗಿರುವಂತೆ ಅದು ಬಿಹಾರದಲ್ಲಿ ಕೆಲವೇ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ವಿವಿಧ ರಾಜ್ಯಗಳಲ್ಲಿ ಸ್ಪರ್ಧಿಸುವ ಎಐಎಂಐಎಮ್ ನಿಲುವು ಬಿಎಸ್‌ಪಿಯ ಸ್ಥಾಪಕ ಕಾನ್ಶಿರಾಮ ಅವರ ತರ್ಕವನ್ನೇ ಪ್ರತಿಧ್ವನಿಸುತ್ತದೆ ಎಂದು ಬದ್ರಿನಾರಾಯಣ ಹೇಳಿದರು. ‘ಮೊದಲ ಚುನಾವಣೆ ಸೋಲಲೆಂದೇ ಇರುತ್ತದೆ. ಎರಡನೇ ಚುನಾವಣೆ ಸೋಲಿಸಲೆಂದು ಇರುತ್ತದೆ ಮತ್ತು ಮೂರನೇ ಚುನಾವಣೆ ಗೆಲುವಿಗಾಗಿ ಇರುತ್ತದೆ ’ಎನ್ನುವುದು ಕಾನ್ಶಿರಾಮ ಅವರ ನಿಲುವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News