ಪ್ರವೇಶ ಪರೀಕ್ಷೆ: ಕೊರೋನ ಶಂಕಿತ ವಿದ್ಯಾರ್ಥಿಗೆ ಪ್ರತ್ಯೇಕ ಕೋಣೆ ಒದಗಿಸಲು ಸುಪ್ರೀಂ ಸೂಚನೆ

Update: 2020-09-28 15:18 GMT

ಹೊಸದಿಲ್ಲಿ, ಸೆ.28: ಕಾನೂನು ಅಭ್ಯಾಸಕ್ಕೆ ಪ್ರವೇಶ ಲಭ್ಯವಾಗಿಸುವ ಸಿಎಲ್‌ಎಟಿ-2020 ಪರೀಕ್ಷೆ ಬರೆಯಲು ಕೊರೋನ ಶಂಕಿತ ವಿದ್ಯಾರ್ಥಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.

ಸೆಪ್ಟಂಬರ್ 28ರಂದು (ಸೋಮವಾರ) ಪರೀಕ್ಷೆ ನಡೆದಿದೆ. ಕೊರೋನ ಸೋಂಕು ಶಂಕಿತ ವಿದ್ಯಾರ್ಥಿ ದೀಪಾಂಶ್ ತ್ರಿಪಾಠಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.

22 ನ್ಯಾಷನಲ್ ಲಾ ವಿವಿ(ಎನ್‌ಎಲ್‌ಯು)ಯ ಪರೀಕ್ಷೆ ಬರೆಯಲು ತನಗೆ ಪ್ರವೇಶ ಪತ್ರ ನೀಡಿದ್ದರೂ, ಕೊರೋನ ಸೋಂಕು ದೃಢಪಟ್ಟಿರುವ ಮತ್ತು ವೈದ್ಯಕೀಯ ನಿಗಾ ವ್ಯವಸ್ಥೆಯಲ್ಲಿರುವ ಅಥವಾ ಕ್ವಾರಂಟೈನ್‌ನಲ್ಲಿರುವ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಎನ್‌ಎಲ್‌ಯು ಒಕ್ಕೂಟ ತಿಳಿಸಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ತ್ರಿಪಾಠಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ, ವಿದ್ಯಾರ್ಥಿಗೆ ಮಧ್ಯಪ್ರದೇಶದ ಗ್ವಾಲಿಯರ್‌ನ ಭಾರತೀಯ ವಿದ್ಯಾಮಂದಿರ ಶಿಕ್ಷಾ ಸಮಿತಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಈಗಾಗಲೇ ಪ್ರವೇಶ ಪತ್ರ ಒದಗಿಸಲಾಗಿದೆ. ಆದ್ದರಿಂದ ಅಲ್ಲಿ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಬೇಕು. ಅಗತ್ಯಬಿದ್ದರೆ ವೈದ್ಯಕೀಯ ಸಿಬ್ಬಂದಿಗಳ ನೆರವನ್ನೂ ಒದಗಿಸಬೇಕು. ಆ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಇತರ ವಿದ್ಯಾರ್ಥಿಗಳೆಲ್ಲಾ ಕೇಂದ್ರದೊಳಗೆ ಹೋದ ಬಳಿಕ ಕೊರೋನ ಶಂಕಿತ ವಿದ್ಯಾರ್ಥಿ ಒಳಗೆ ಹೋಗಬೇಕು ಮತ್ತು ಉಳಿದವರಿಗಿಂತ ಮೊದಲು ಹೊರಹೋಗಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News