ಭಾರತದಲ್ಲಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಮಾನವ ಹಕ್ಕು ಸಂಸ್ಥೆ

Update: 2020-09-29 06:07 GMT

ಹೊಸದಿಲ್ಲಿ: ಜಾಗತಿಕ ಮಾನವ ಹಕ್ಕುಗಳ ಸಂಘಟನೆಯಾಗಿರುವ ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್ ತಾನು ಭಾರತದಲ್ಲಿನ ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಸರಕಾರ ಈ ತಿಂಗಳು ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿರುವುದರಿಂದ ಕಾರ್ಯನಿರ್ವಹಿಸುವುದು ಅಸಾಧ್ಯವಾಗಿದೆ ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ಉದ್ಯೋಗದಿಂದ ಕೈಬಿಡಬೇಕಾಯಿತು ಎಂದು ಹೇಳಿದೆ.

ಆದರೆ ಸರಕಾರ ಮಾತ್ರ ಆ್ಯಮ್ನೆಸ್ಟಿ ಸಂಸ್ಥೆಯು ಫೆರಾ ಅಥವಾ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯಡಿ ಯಾವತ್ತೂ ಹೆಸರು ನೋಂದಣಿ ಮಾಡಿಕೊಂಡಿಲ್ಲವೆಂದು ಹೇಳಿದೆ.

"ಭಾರತ ಸರಕಾರವು ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿದೆ ಎಂದು ಸೆಪ್ಟೆಂಬರ್ 10ರಂದು ಕಂಡುಕೊಂಡ ನಂತರ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ,'' ಎಂದು ಆ್ಯಮ್ನೆಸ್ಟಿ ಹೇಳಿದೆ. ತನ್ನ ಸಿಬ್ಬಂದಿಗಳನ್ನು ಕೈಬಿಡುವುದರ ಜತೆಗೆ ತನ್ನ ಎಲ್ಲಾ ಸಂಶೋಧನೆ ಮತ್ತು ಅಭಿಯಾನಗಳನ್ನೂ ಅದು ಸ್ಥಗಿತಗೊಳಿಸಿದೆ.

ಆ್ಯಮ್ನೆಸ್ಟಿ ವರದಿಗಳು ಸರಕಾರವನ್ನು ಟೀಕಿಸಿರುವುದರಿಂದ ಹಾಗೂ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಸಂದರ್ಭ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಸಂಸ್ಥೆ ಎತ್ತಿದ ಪ್ರಶ್ನೆಗಳು ಹಾಗೂ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸಿದ್ದನ್ನು ಪ್ರಶ್ನಿಸಿದ್ದರ ಫಲವಾಗಿ ಸರಕಾರ ಇಂತಹ ವಿಪರೀತ ಕ್ರಮ ಕೈಗೊಂಡಿದೆ ಎಂದು ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಅವಿನಾಶ್ ಕುಮಾರ್ ಆರೋಪಿಸಿದ್ದಾರೆ.

ವಿದೇಶಿ ದೇಣಿಗೆ ಪಡೆಯುವಲ್ಲಿ ಅವ್ಯವಹಾರಗಳನ್ನು ನಡೆಸಿದೆ ಎಂಬ ಆರೋಪದ ಕುರಿತು ಆ್ಯಮ್ನೆಸ್ಟಿ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸಂಸ್ಥೆಯು ಎಫ್‍ಡಿಐ ಮಾರ್ಗದ ಮೂಲಕ ಹಣ ಪಡೆದಿದೆ ಹಾಗೂ ಲಾಭದ ಉದ್ದೇಶ ಹೊಂದಿಲ್ಲದೇ ಇರುವ ಸಂಸ್ಥೆಗಳಿಗೆ ಇದಕ್ಕೆ ಅನುಮತಿಯಿಲ್ಲ ಎಂದು ಸರಕಾರ ಹೇಳುತ್ತಿದೆ.

ಆ್ಯಮ್ನೆಸ್ಟಿಯ ಲಂಡನ್ ಘಟಕವು ಭಾರತಕ್ಕೆ ರೂ. 10 ಕೋಟಿ ಹಣವನ್ನು ಕೇಂದ್ರ ಸಚಿವಾಲಯದ ಅನುಮತಿಯಿಲ್ಲದೆ ಎಫ್‍ಡಿಐ ಮೂಲಕ ರವಾನಿಸಿದ ಪ್ರಕರಣ ಸಂಬಂಧ ಸಿಬಿಐ ತನಿಖೆಯೂ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News