ದೇಶದಲ್ಲಿ ಆಗಸ್ಟ್ ವೇಳೆಗೆ 15 ಜನರಲ್ಲಿ ಓರ್ವನಿಗೆ ಕೊರೋನ ಸೋಂಕು ತಗಲಿತ್ತು: ಐಸಿಎಂಆರ್

Update: 2020-09-29 15:54 GMT

ಹೊಸದಿಲ್ಲಿ,ಸೆ.29: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ನಡೆಸಿದ ದ್ವಿತೀಯ ರಾಷ್ಟ್ರೀಯ ಸೆರೊಲಾಜಿಕಲ್ ಅಥವಾ ರಕ್ತದಲ್ಲಿನ ಸೀರಮ್ ‌ಗಳ ಅಧ್ಯಯನ ಸಮೀಕ್ಷೆಯು 2020ರ ಆಗಸ್ಟ್ ವೇಳೆಗೆ ದೇಶದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಪ್ರತಿ 15 ಜನರಲ್ಲಿ ಓರ್ವ ವ್ಯಕ್ತಿ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದ ಎಂದು ಅಂದಾಜಿಸಿದೆ.

ಆ.17ರಿಂದ ಸೆ.22ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 29,082 ಜನರು ಪಾಲ್ಗೊಂಡಿದ್ದು,ಶೇ.6.66 ಜನರು ಹಿಂದೆ ಸೀವಿಯರ್ ಎಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೋನ ವೈರಸ್ 2 (ಸಾರ್ಸ್ ಕೋವ್ 2)ಗೆ ಗುರಿಯಾಗಿದ್ದರು ಎನ್ನುವುದು ಬೆಳಕಿಗೆ ಬಂದಿದೆ ಎಂದು ಐಸಿಎಂಆರ್ ಮಹಾ ನಿರ್ದೇಶಕ ಡಾ.ಬಲರಾಮ ಭಾರ್ಗವ ಹೇಳಿದರು.

ದ್ವಿತೀಯ ಸೆರೊ ಸಮೀಕ್ಷೆಯ ವರದಿಯಂತೆ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರದ ಕೊಳಗೇರಿಗಳು ಮತ್ತು ಕೊಳಗೇರಿಯೇತರ ಪ್ರದೇಶಗಳ ಜನರಲ್ಲಿ ಸಾರ್ಸ್ ಕೋವ್ 2 ಸೋಂಕು ಹೆಚ್ಚಾಗಿತ್ತು. ಜನಸಂಖ್ಯೆಯ ಹೆಚ್ಚಿನ ಭಾಗ ಇನ್ನೂ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳಿದ್ದು,ಇದನ್ನು ತಡೆಯಲು ‘ಐದು ಟಿ (ಟೆಸ್ಟ್, ಟ್ರಾಕ್,ಟ್ರೇಸ್ ,ಟ್ಟ್ರೀಟ್, ಟೆಕ್ನಾಲಜಿ)’ ಕಾರ್ಯತಂತ್ರಕ್ಕೆ ಅಂಟಿಕೊಳ್ಳಬೇಕಿದೆ ಎಂದು ಮಂಗಳವಾರ ಇಲ್ಲಿ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರ್ಗವ ತಿಳಿಸಿದರು.

ಜನಸಂಖ್ಯೆಯ ಗಣನೀಯ ಭಾಗ ಈಗಲೂ ಕೋವಿಡ್-19ಕ್ಕೆ ಸುಲಭಭೇದ್ಯವಾಗಿದೆ ಎನ್ನುವುದನ್ನು ವರದಿಯು ಬಹಿರಂಗಗೊಳಿಸಿದೆ. ಮುಂಬರುವ ಹಬ್ಬಗಳು, ಚಳಿಗಾಲ ಮತ್ತು ಸಾಮೂಹಿಕ ಸಮಾವೇಶಗಳ ಹಿನ್ನೆಲೆಯಲ್ಲಿ ರಾಜ್ಯಗಳು ಸೃಜನಶೀಲ ನಿಯಂತ್ರಣ ಕಾರ್ಯತಂತ್ರಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು,ಭಾರತದಲ್ಲಿ ಗುಣಮುಖಗೊಂಡ ಪ್ರಕರಣಗಳ ಸಂಖ್ಯೆ ಮಂಗಳವಾರ 51 ಲಕ್ಷ ದಾಟಿದ್ದು,ಇದು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ ಎಂದು ಹೇಳಿದರು.

ಭಾರತವು ಪ್ರತಿ 10 ಲಕ್ಷ ಜನಸಂಖ್ಯೆಗೆ 4,453 ಕೋವಿಡ್ ಪ್ರಕರಣಗಳು ಮತ್ತು 70 ಸಾವುಗಳ ದರವನ್ನು ಹೊಂದಿದ್ದು,ಇದು ವಿಶ್ವದಲ್ಲಿಯೇ ಕನಿಷ್ಠವಾಗಿದೆ. ದೇಶದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಕೋವಿಡ್-19 ಪರೀಕ್ಷೆಗಳು 50,000 ದಾಟಿದ್ದು,ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಒಟ್ಟು 2.97 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News