ಭಾರತಕ್ಕೆ ಚೀನಾದ ಹೊಸ ಮಾರಣಾಂತಿಕ ವೈರಸ್‌ನ ಭೀತಿ

Update: 2020-09-29 17:27 GMT

ಹೊಸದಿಲ್ಲಿ, ಸೆ.29: ಚೀನಾ ಮೂಲದ ಕೊರೋನ ವೈರಸ್ ಸೋಂಕಿನ ಆಘಾತದಿಂದ ತತ್ತರಿಸಿರುವ ಭಾರತಕ್ಕೆ ಈಗ ಚೀನಾದ ಮತ್ತೊಂದು ನಿಗೂಢ ವೈರಸ್‌ನ ಭೀತಿ ಎದುರಾಗಿದೆ. ಜನರ ಜೀವಕ್ಕೆ ಮಾರಣಾಂತಿಕವಾಗಬಲ್ಲ ಕ್ಯಾಟ್ ಕ್ಯು ಎಂಬ ಹೊಸ ವೈರಸ್ ದೇಶಕ್ಕೆ ಕಾಲಿಟ್ಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಆತಂಕಕಾರಿ ವಿಷಯವೆಂದರೆ, ಈ ವೈರಸ್‌ನ ಪ್ರತಿಕಾಯ ಕರ್ನಾಟಕದ ಇಬ್ಬರು ವ್ಯಕ್ತಿಗಳ ದೇಹದಿಂದ ತೆಗೆದ ಸ್ಯಾಂಪಲ್‌ನಲ್ಲಿ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

  ಪ್ರಾಣಿಗಳು(ಸೊಳ್ಳೆ, ಹಂದಿ ಇತ್ಯಾದಿ) ಹಾಗೂ ಮನುಷ್ಯರಿಗೆ ಸೋಂಕು ಹತ್ತಿಸುವ ನಿಗೂಢ ಕ್ಯಾಟ್ ಕ್ಯು ವೈರಸ್ ಸೊಳ್ಳೆ , ಉಣ್ಣೆಯಿಂದ ಹರಡುತ್ತದೆ. ಸಾಧಾರಣದಿಂದ ತೀವ್ರ ಸ್ವರೂಪದ ಫ್ಲೂ ರೀತಿಯ ಜ್ವರ ಬರುವುದು ಇದರ ಲಕ್ಷಣವಾಗಿದೆ. ಸಾಮಾನ್ಯವಾಗಿ ಕೋಳಿ ಹಾಗೂ ಸಸ್ತನಿಗಳ ದೇಹದಲ್ಲಿರುವ ಉಣ್ಣೆ ಅಥವಾ ಸೊಳ್ಳೆಗಳ ಮೂಲಕ ಮಾನವನ ದೇಹ ಪ್ರವೇಶಿಸುತ್ತವೆ. ಕೋಳಿ ಅಥವಾ ಸಸ್ತನಿಯನ್ನು ಕಚ್ಚಿದ ಸೊಳ್ಳೆ ಅಥವಾ ಉಣ್ಣೆ ಮನುಷ್ಯನನ್ನು ಕಚ್ಚಿದಾಗ ಈ ಮಾರಣಾಂತಿಕ ವೈರಸ್ ವ್ಯಕ್ತಿಯ ದೇಹ ಪ್ರವೇಶಿಸುತ್ತದೆ. ಅಲ್ಲದೆ, ರಕ್ತಪೂರಣ, ಅಂಗಾಂಗ ಕಸಿ, ಲೈಂಗಿಕ ಸಂಪರ್ಕ, ಗರ್ಭಧಾರಣೆ, ಹೆರಿಗೆ ಸಂದರ್ಭದಲ್ಲೂ ಈ ಸೋಂಕು ದೇಹವನ್ನು ಪ್ರವೇಶಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಭಾರತದಲ್ಲಿ ಈಜಿಪ್ಟಿ, ಸಿಎಕ್ಸ್ ಕ್ವಿನ್‌ಕೆಫಾಷೇಟಸ್ ಮುಂತಾದ ಜಾತಿಯ ಸೊಳ್ಳೆಗಳಿಂದ ಈ ವೈರಸ್ ಹರಡುವ ಅಪಾಯವಿದೆ ಎಂದು ವಿಜ್ಞಾನಿಗಳು ಹೇಳಿದ್ದು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನ ಇತ್ತೀಚಿನ ಸಂಚಿಕೆಯಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ. ಹಂದಿ, ಸೊಳ್ಳೆ, ಕಾಡು ಮೈನಾ ಹಕ್ಕಿ ಮುಂತಾದ ಸಸ್ತನಿಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಈ ಸೋಂಕು ಕೊರೋನ ವೈರಸ್‌ನಂತೆಯೇ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮಾರ್ಪಾಡಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ದೇಶದ ವಿವಿಧೆಡೆಯಲ್ಲಿ ಪರೀಕ್ಷಿಸಲಾದ 883 ಮಾನವ ಸ್ಯಾಂಪಲ್‌ಗಳಲ್ಲಿ 2ರಲ್ಲಿ ಕೆಲವು ಪ್ರತಿಕಾಯ(ಆ್ಯಂಟಿಬಾಡಿ)ಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ವಿಜ್ಞಾನಿಗಳು ಪತ್ತೆಹಚ್ಚಿದಾಗ ಈ ನಿಗೂಢ ವೈರಸ್‌ನ ಬಗ್ಗೆ ತಿಳಿದುಬಂದಿದೆ. ಈ ಪ್ರತಿಕಾಯಗಳು ಕ್ಯಾಟ್ ಕ್ಯು ವೈರಸ್‌ಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ದೇಶದಲ್ಲಿ ಹಲವರಿಗೆ ಈ ಸೋಂಕು ತಗುಲಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕರ್ನಾಟಕದಲ್ಲಿ ಸೋಂಕು ಪತ್ತೆ

ಕ್ಯಾಟ್ ಕ್ಯು ವೈರಸ್ ಅನ್ನು ನಿರ್ಲಕ್ಷಿತ ಅಪಾಯಕಾರಿ ವೈರಸ್ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಈ ಎರಡು ಸ್ಯಾಂಪಲ್‌ಗಳನ್ನು ಕರ್ನಾಟಕದಿಂದ 2014 ಮತ್ತು 2017ರಲ್ಲಿ ಸಂಗ್ರಹಿಸಲಾಗಿದೆ. ರಾಜ್ಯದ ಇಬ್ಬರಿಗೆ ಈ ಸೋಂಕು ತಗಲಿದೆ. ಬಳಿಕ ಸೋಂಕಿನ ಪ್ರತಿಕಾಯ ದೇಹದಲ್ಲಿ ಉತ್ಪತ್ತಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಸೋಂಕು ವಿಯೆಟ್ನಾಮ್, ಚೀನಾ ಮುಂತಾದ ಕೆಲವು ಏಶ್ಯನ್ ದೇಶಗಳಲ್ಲಿ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News