ಎಲ್‌ಐಸಿಯ 25% ಶೇರು ಮಾರಾಟಕ್ಕೆ ಸರಕಾರದ ಚಿಂತನೆ?

Update: 2020-09-29 18:27 GMT

 ಹೊಸದಿಲ್ಲಿ, ಸೆ.29: ದೇಶದ ಬೃಹತ್ ಜೀವವಿಮೆ ಸಂಸ್ಥೆಯಲ್ಲಿ ಕೇಂದ್ರ ಸರಕಾರ ಹೊಂದಿರುವ ಪಾಲಿನಲ್ಲಿ 25% ಶೇರುಗಳನ್ನು ಹಂತಹಂತವಾಗಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶೇರು ಮಾರಾಟಕ್ಕೆ ಪೂರ್ವಭಾವಿಯಾಗಿ, ಎಲ್‌ಐಸಿ ರಚನೆಯ ಕುರಿತ ಮಸೂದೆಯನ್ನು ತಿದ್ದುಪಡಿ ಮಾಡಲು ಸಿದ್ಧತೆ ನಡೆಯುತ್ತಿದೆ. ಮಾರುಕಟ್ಟೆ ಪರಿಸ್ಥಿತಿಯನ್ನು ಅವಲಂಬಿಸಿ, ಹಂತಹಂತವಾಗಿ ಶೇರುಗಳನ್ನು ಮಾರುವ ಉದ್ದೇಶವಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕೊರೋನ ಸೋಂಕಿನಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆಯುಂಟಾಗಿದ್ದು, ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ. ಇದರಿಂದ ಬಜೆಟ್ ಲೆಕ್ಕಾಚಾರ ಏರುಪೇರಾಗಿರುವುದರಿಂದ ಸರಕಾರಿ ಸಂಸ್ಥೆಗಳಲ್ಲಿರುವ ಶೇರುಗಳನ್ನು ಮಾರಾಟ ಮಾಡಲು ಸರಕಾರ ನಿರ್ಧರಿಸಿದ್ದು, ಈ ಮೂಲಕ 2. 1ಲಕ್ಷ ಕೋಟಿ ರೂ. ಸಂಗ್ರಹಿಸುವ ಉದ್ದೇಶವಿದೆ. ಎಲ್‌ಐಸಿಯ ಶೇರು ಮಾರಾಟ ಪ್ರಕ್ರಿಯೆಗೆ ನೆರವಾಗಲು ಸರಕಾರ ಡೆಲಾಟ್ ಟಚ್ ತೊಮಾತ್ಸು ಇಂಡಿಯಾ ಲಿ. ಹಾಗೂ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಕಳೆದ ತಿಂಗಳು ವರದಿ ಮಾಡಿತ್ತು.

  ಎಲ್‌ಐಸಿ ಶೇರು ಮಾರಾಟದ ಬಗ್ಗೆ ನಿರ್ಧರಿಸಲು ಸಚಿವ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ ಮತ್ತು ಸಚಿವ ಸಂಪುಟ ಸಭೆಯು ಎಲ್‌ಐಸಿಯ ಬಂಡವಾಳ ಸ್ವರೂಪದ ಬಗ್ಗೆ ನಿರ್ಧರಿಸಲಿದೆ. ಎಲ್‌ಐಸಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಿಂದ ಶಿಸ್ತು ತುಂಬಲು ಹಾಗೂ ಸಂಸ್ಥೆಯ ವೌಲ್ಯಗಳನ್ನು ವೃದ್ಧಿಸಲು ಅನುಕೂಲವಾಗುತ್ತದೆ ಎಂದು ಕಳೆದ ಫೆಬ್ರವರಿಯಲ್ಲಿ ಬಜೆಟ್ ಭಾಷಣದ ಸಂದರ್ಭ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News