ಮಹಿಳೆಯರ ವಿರುದ್ಧದ ಹಿಂಸೆ ಪ್ರಕರಣದಲ್ಲಿ ಹೆಚ್ಚಳ: ಉತ್ತರಪ್ರದೇಶಕ್ಕೆ ಅಗ್ರಸ್ಥಾನ

Update: 2020-09-30 17:53 GMT

ಹೊಸದಿಲ್ಲಿ, ಸೆ.30: ಭಾರತದಲ್ಲಿ (2019ರಲ್ಲಿ) ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣದಲ್ಲಿ 7.3 ಶೇ. ಹೆಚ್ಚಳವಾಗಿದ್ದು 4,05,861ಕ್ಕೆ ಏರಿದೆ. ಇದರಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದ ವರದಿ ತಿಳಿಸಿದೆ.

ಉತ್ತರಪ್ರದೇಶದಲ್ಲಿ 59,853 ಪ್ರಕರಣ ದಾಖಲಾಗಿದ್ದರೆ, ಪ್ರತೀ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ 117.8 ಶೇ. ಪ್ರಮಾಣದೊಂದಿಗೆ ಅಸ್ಸಾಂ ಮೊದಲ ಸ್ಥಾನದಲ್ಲಿದೆ ಎಂದು ಮಂಗಳವಾರ ಬಿಡುಗಡೆಯಾದ ‘ಭಾರತದಲ್ಲಿ ಅಪರಾಧ ಪ್ರಕರಣ-2019’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ದೇಶದಲ್ಲಿ 2019ರಲ್ಲಿ ಪ್ರತೀದಿನ ಸರಾಸರಿ 87 ಅತ್ಯಾಚಾರ ಪ್ರಕರಣ ದಾಖಲಾಗಿದೆ . ಈ ಅಪರಾಧಗಳಲ್ಲಿ ಹೆಚ್ಚಿನವು ‘ಪತಿ ಮತ್ತು ಆತನ ಬಂಧುಗಳ ಕ್ರೌರ್ಯ’ ವಿಭಾಗದಲ್ಲಿ (30.9 ಶೇ.) ದಾಖಲಾಗಿದ್ದರೆ, ಮಹಿಳೆಯ ಮಾನಭಂಗದ ಉದ್ದೇಶದಿಂದ ನಡೆಸುವ ಕ್ರೌರ್ಯದ ಪ್ರಮಾಣ 21.8 ಶೇ., ಮಹಿಳೆಯ ಅಪಹರಣ ಪ್ರಮಾಣ 17.9 ಶೇ. ಆಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಮಕ್ಕಳ ವಿರುದ್ಧದ ಅಪರಾಧದ ಪ್ರಕರಣದಲ್ಲಿ 2018ಕ್ಕೆ ಹೋಲಿಸಿದರೆ ಕಳೆದ ವರ್ಷ 4.5 ಶೇ. ಹೆಚ್ಚಳವಾಗಿದೆ. 2019ರಲ್ಲಿ ಮಕ್ಕಳ ವಿರುದ್ಧದ ಅಪರಾಧದ 1.48 ಲಕ್ಷ ಪ್ರಕರಣ ದಾಖಲಾಗಿದೆ. ಇದರಲ್ಲಿ 46.6 ಶೇ. ಪ್ರಕರಣ ಅಪಹರಣ ಮತ್ತು 35.3% ಪ್ರಕರಣ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದೆ. ಪೋಕ್ಸೊ ಕಾಯ್ದೆಯಡಿ ದಾಖಲಾದ ಹೆಣ್ಣು ಮಕ್ಕಳ ವಿರುದ್ಧದ ಅಪರಾಧ ಪ್ರಕರಣದಲ್ಲೂ ಉತ್ತರಪ್ರದೇಶ 7,444 ಪ್ರಕರಣದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 6,402, ಮಧ್ಯಪ್ರದೇಶ 6,053 ಪ್ರಕರಣದೊಂದಿಗೆ ನಂತರದ ಸ್ಥಾನದಲ್ಲಿವೆ.

ದೇಶದಾದ್ಯಂತ 2019ರಲ್ಲಿ ಕೊಲೆ ಪ್ರಕರಣದಲ್ಲಿ 0.3 ಶೇ. ಇಳಿಕೆಯಾಗಿದೆ(ಕಳೆದ ವರ್ಷಕ್ಕೆ ಹೋಲಿಸಿದರೆ). 2019ರಲ್ಲಿ ದೇಶದಲ್ಲಿ ಪ್ರತೀ ದಿನ ಸರಾಸರಿ 79 ಕೊಲೆ ಪ್ರಕರಣ ದಾಖಲಾಗಿದ್ದು ಒಟ್ಟು 28,918 ಕೊಲೆ ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣದಲ್ಲಿ ‘ವಿವಾದ’ ವಿಭಾಗದಡಿ 9,516 ಪ್ರಕರಣ, ವೈಯಕ್ತಿಕ ದ್ವೇಷ ವಿಭಾಗದಡಿ 3,833 ಪ್ರಕರಣ ದಾಖಲಾಗಿದೆ. 2019ರಲ್ಲಿ ಅಪಹರಣ ಪ್ರಕರಣದಲ್ಲೂ 0.7 ಶೇ. ಇಳಿಕೆಯಾಗಿದ್ದು ಒಟ್ಟು 1,05,037 ಪ್ರಕರಣ ದಾಖಲಾಗಿದೆ. ಅಪಹೃತಗೊಂಡವರಲ್ಲಿ 23,104 ಪುರುಷರು ಮತ್ತು 84,921 ಮಹಿಳೆಯರು. ಅಪಹೃತರಲ್ಲಿ 95,551 ವ್ಯಕ್ತಿಗಳನ್ನು ಜೀವಂತ ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News