"ಹತ್ರಸ್ ಸಂತ್ರಸ್ತೆಯನ್ನು ಉಸಿರುಗಟ್ಟಿಸಲಾಗಿತ್ತು, ಕುತ್ತಿಗೆ ಮೂಳೆ ಮುರಿದಿತ್ತು"

Update: 2020-10-01 14:12 GMT

ಹತ್ರಸ್ (ಉ.ಪ್ರ), ಅ.1: ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ ಹತ್ರಾಸ್‌ನ 20ರ ಹರೆಯದ ದಲಿತ ಯುವತಿಯನ್ನು ಉಸಿರುಗಟ್ಟಿಸಲಾಗಿತ್ತು, ಕ್ರೌರ್ಯವನ್ನು ಮೆರೆಯಲಾಗಿತ್ತು ಮತ್ತು ಆಕೆಯ ಕುತ್ತಿಗೆಯ ಮೂಳೆ ಮುರಿದಿತ್ತು ಎಂದು ಮರಣೋತ್ತರ ಪರೀಕ್ಷಾ ವರದಿಯು ಹೇಳಿದೆ. ವರದಿಯು ಅತ್ಯಾಚಾರವನ್ನು ಉಲ್ಲೇಖಿಸಿಲ್ಲವಾದರೂ, ಆಕೆಯ ಗುಪ್ತಾಂಗಗಳಿಗೆ ಗಾಯಗಳಾಗಿದ್ದನ್ನು ಪ್ರಸ್ತಾಪಿಸಿದೆ.

ಬಲವಾದ ಹೊಡೆತದಿಂದ ಕುತ್ತಿಗೆಯ ಮೂಳೆ ಮುರಿತದಿಂದಾಗಿ ಯುವತಿ ಮೃತಪಟ್ಟಿದ್ದಾಳೆ ಎಂದು ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ. ಆಕೆಯ ದುಪ್ಪಟ್ಟಾವನ್ನು ಬಳಸಿ ಉಸಿರುಗಟ್ಟಿಸಲು ಪ್ರಯತ್ನಿಸಲಾಗಿತ್ತಾದರೂ ಸಾವಿಗೆ ಅದು ಕಾರಣವಾಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಗ್ರಾಮದವರೇ ಆದ ನಾಲ್ವರು ಮೇಲ್ಜಾತಿಯ ವ್ಯಕ್ತಿಗಳು ಸೆ.14ರಂದು ಯುವತಿಯ ಮೇಲೆ ದೌರ್ಜನ್ಯವೆಸಗಿದ್ದರು. ಯುವತಿಯ ಕುಟುಂಬವು ಹೊಲವೊಂದರಲ್ಲಿ ಆಕೆಯನ್ನು ಪತ್ತೆ ಹಚ್ಚಿದಾಗ ಆಕೆ ಸಂಪೂರ್ಣ ವಿವಸ್ತ್ರಳಾಗಿದ್ದಳು. ವಿಪರೀತ ರಕ್ತಸ್ರಾವವಾಗುತ್ತಿತ್ತಲ್ಲದೆ ಹಲವಾರು ಮೂಳೆಗಳು ಮುರಿದಿದ್ದವು. ನಾಲಿಗೆ ತುಂಡಾಗಿತ್ತು ಎಂದು ಆರೋಪಿಸಲಾಗಿದೆ. ಅಲಿಗಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಸಂತ್ರಸ್ತೆಯನ್ನು ಸೋಮವಾರ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮರುದಿನ ಕೊನೆಯುಸಿರೆಳೆದಿದ್ದಳು.

ದುಷ್ಕರ್ಮಿಗಳು ಉಸಿರುಗಟ್ಟಿಸಲು ಪ್ರಯತ್ನಿಸಿದಾಗ ಯವತಿ ನಾಲಿಗೆಯನ್ನು ಕಚ್ಚಿಕೊಂಡಿದ್ದರಿಂದ ಅದು ತುಂಡಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯ ವೈದ್ಯಕೀಯ ದಾಖಲೆಯಲ್ಲಿರುವ ಅತ್ಯಾಚಾರ ಮತ್ತು ಉಸಿರುಗಟ್ಟಿಸುವಿಕೆಯನ್ನು ಪ್ರಸ್ತಾಪಿಸಿರುವ ವರದಿಯು,ಆಕೆಯ ಕುತ್ತಿಗೆಯ ಮೂಳೆ ಮುರಿದಿತ್ತು. ನಂಜು ಮತ್ತು ಹೃದಯಸ್ತಂಭನ ಉಂಟಾಗಿತ್ತು ಎಂದು ಹೇಳಿದೆ.

ಕುತ್ತಿಗೆಗೆ ಬಿದ್ದ ಹೊಡೆತದಿಂದಾಗಿ ಯುವತಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಳು ಮತ್ತು ಉಸಿರಾಡಲು ಕಷ್ಟವಾಗುತ್ತಿತ್ತು ಎಂದು ಆಕೆಯ ಕುಟುಂಬವು ಹೇಳಿದೆ.

ಯುವತಿಯನ್ನು ಬದುಕಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿತ್ತು ಮತ್ತು ಸಿಪಿಆರ್ ಸೇರಿದಂತೆ ಎಲ್ಲ ಪುನಃಶ್ಚೇತನ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ವರದಿಯು ಸಾವಿನ ಸಾರಾಂಶದಲ್ಲಿ ತಿಳಿಸಿದೆ.

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಉತ್ತರ ಪ್ರದೇಶ ಪೊಲೀಸರು ಯುವತಿಯ ಶವವನ್ನು ಆಸ್ಪತ್ರೆಯಿಂದ ಒಯ್ದು,ಹೆತ್ತವರು ಮತ್ತು ಸೋದರರನ್ನು ಅವರ ಮನೆಯಲ್ಲಿ ಕೂಡಿಹಾಕಿ ರಾತ್ರೋರಾತ್ರಿ ಗ್ರಾಮದ ಸಮೀಪ ಅಂತ್ಯಸಂಸ್ಕಾರವನ್ನು ನಡೆಸಿದ್ದರು. ಮರುದಿನ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಸುಲು ಯುವತಿಯ ಕುಟುಂಬ ಬೇಡಿಕೊಂಡಿತ್ತಾದರೂ,ಅಂತ್ಯಸಂಸ್ಕಾರಕ್ಕೆ ಮುನ್ನ ಆಕೆಯ ಅಂತಿಮ ದರ್ಶನವನ್ನು ಪಡೆಯಲೂ ಪೊಲೀಸರು ಅವರಿಗೆ ಅವಕಾಶ ನೀಡಿರಲಿಲ್ಲ. ಇದು ಘಟನೆಯ ಕುರಿತು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News