×
Ad

ಕೆಟ್ಟ ನಿರ್ವಹಣೆಗಾಗಿ ಎಸ್‌ಪಿ ಸೇರಿದಂತೆ ಐವರು ಪೊಲೀಸರ ಅಮಾನತು

Update: 2020-10-02 21:15 IST

ಲಕ್ನೋ,ಅ.2: ಉತ್ತರ ಪ್ರದೇಶದ ಹತ್ರಸ್ ಜಿಲ್ಲೆಯಲ್ಲಿ ಮೇಲ್ಜಾತಿಗೆ ಸೇರಿದ ಆರೋಪಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದ 20ರ ಹರೆಯದ ಯುವತಿಯ ಸಾವಿನ ಕುರಿತು ದೇಶವ್ಯಾಪಿ ಭುಗಿಲೆದ್ದಿರುವ ಆಕ್ರೋಶದ ನಡುವೆಯೇ ಪ್ರಕರಣವನ್ನು ಕೆಟ್ಟದಾಗಿ ನಿರ್ವಹಿಸಿದ ಆರೋಪದಲ್ಲಿ ಓರ್ವ ಎಸ್‌ಪಿ ಸೇರಿದಂತೆ ಐವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಘಟನೆಯ ಕುರಿತು ತನಿಖೆಯ ಹೊಣೆಯನ್ನು ವಹಿಸಲಾಗಿರುವ ವಿಶೇಷ ತನಿಖಾ ತಂಡದ ಆರಂಭಿಕ ವರದಿಯು ಈ ಪೊಲೀಸರ ಅಮಾನತಿಗೆ ಶಿಫಾರಸು ಮಾಡಿತ್ತು.

ಬಂಧಿತ ಶಂಕಿತರು ಮತ್ತು ಮೃತ ಯುವತಿಯ ಕುಟುಂಬದವರು ಸೇರಿದಂತೆ ಪ್ರಕರಣಕ್ಕೆ ಸಂಬಂಧಿತ ಎಲ್ಲರನ್ನು ಸುಳ್ಳುಪತ್ತೆ ಪರೀಕ್ಷೆಗೊಳಪಡಿಸಲು ತನಿಖಾ ತಂಡವು ಕೋರಿದೆ.

 ಸೆ.14ರಂದು ಹತ್ರಸ್ ನ ತನ್ನ ಮನೆಯ ಸಮೀಪದ ಹೊಲದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೊಳಗಾದ ಸ್ಥಿತಿಯಲ್ಲಿದ್ದ ಯುವತಿಯು ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಹೆಚ್ಚಿನ ಪ್ರತಿಭಟನೆಗಳಿಗೆ ಅವಕಾಶವಾಗದಿರಲು ಪೊಲೀಸರು ಅವಸರದಲ್ಲಿ ನಸುಕಿನ 2:30ರ ವೇಳೆಗೆ ಮೃತಳ ಅಂತ್ಯಸಂಸ್ಕಾರವನ್ನು ನಡೆಸಿದ್ದರು. ಆದರೆ ದೇಶಾದ್ಯಂತ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ. ಶುಕ್ರವಾರ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News