ವಿ4 ಸ್ಟ್ರೀಮ್‍ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ‘ಬಣ್ಣಬಣ್ಣದ ಬದುಕು’

Update: 2020-10-03 17:45 GMT

ಮಂಗಳೂರು : ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಯಕ್ಷಗಾನ ಲೋಕವನ್ನು ಅನಾವರಣ ಮಾಡಿದ ಸಿನೆಮಾ ಅಂದ್ರೆ ಬಣ್ಣ ಬಣ್ಣದ ಬದುಕು. ಶ್ರೀಮುತ್ತುರಾಮ್ ಕ್ರಿಯೇಷನ್ ಕಾರ್ಕಳ ಲಾಂಚನದಲ್ಲಿ ಮೂಡಿಬಂದಿರುವ ಈ ಕನ್ನಡ ಸಿನಿಮಾ ‘ವಿ4 ಸ್ಟ್ರೀಮ್’ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಣ್ಣ ಬಣ್ಣದ ಬದುಕು ಸಿನಿಮಾದ ಒಳಗೆ ಕರಾವಳಿಯ ಕೌಟುಂಬಿಕ, ಸಾಮಾಜಿಕ, ಸಾಂಸಕೃತಿಕ ಬದುಕು ಮೆಲ್ಲಮೆಲ್ಲನೇ ತೆರೆದುಕೊಳ್ಳುತ್ತದೆ. ಜಾತಿ, ಧರ್ಮದ ಹಂಗನ್ನು ಮೀರಿದ ಯಕ್ಷಗಾನದಲ್ಲಿ ಮಿಂಚುವ ಕಲಾವಿದನೊಬ್ಬ ಧರ್ಮದ ಕಾರಣಕ್ಕೆ ವೈಯಕ್ತಿಕ ಬದುಕಿನಲ್ಲಿ ಅನುಭವಿಸುವ ವಿಚಾರಗಳನ್ನು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ.

ಸಿನಿಮಾದಲ್ಲಿ ಅಬ್ಬು ಬ್ಯಾರಿಯಾಗಿ ಮುಂಬೈ ಮಾಡೆಲ್ ರವಿರಾಜ್ ಶೆಟ್ಟಿ ಅಭನಯಿಸಿದ್ದು, ಯಕ್ಷಗಾನ ಪಾತ್ರಕ್ಕಿಂತಲೂ ಮಗನಾಗಿ, ಪತಿಯಾಗಿ, ಹಿರಿಯರನ್ನು ಗೌರವಿಸುವಲ್ಲಿ ಗಮನ ಸೆಳೆಯುತ್ತಾರೆ. ಅಬ್ಬುವಿನ ಮಡದಿಯಾಗಿ ಅನ್ವಿತಾ ಸಾಗರ್ ಮಿಂಚಿದ್ದಾರೆ. ಜೊತೆಗೆ ರಿಯಾ ಮೇಘನಾ, ಸತ್ಯಜಿತ್, ರಮೇಶ್ ಭಟ್, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಲಕ್ಷ್ಮಣ ಕುಮಾರ್ ಮಲ್ಲೂರ್, ಅಪೂರ್ವ ಶ್ರೀ, ರಮೇಶ್ ರೈ ಕುಕ್ಕುವಳ್ಳಿ, ಸ್ಟ್ಯಾನಿ ಆಲ್ವಾರಿಸ್, ಮಾಸ್ಟರ್ ಗೌತಮ್ ನಾಯ್ಕ್ ಹೀಗೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿಶೇಷ ಪಾತ್ರದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಕೂಡಾ ನಟಿಸಿದ್ದಾರೆ.

ವಿಜಯ್ ಸಲ್ಡಾನ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್ ಅವರ ಸಂಕಲನ, ಎ. ಕೆ.ವಿಜಯ್ ಕೋಕಿಲ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು ಎಂ.ಡಿ.ಪಲ್ಲವಿ, ರವೀಂದ್ರ ಪ್ರಭು ಮೂಲ್ಕಿ ಹಾಗೂ ವಿದ್ಯಾಶರದ್ ಚಿತ್ರದಲ್ಲಿ ಹಾಡಿದ್ದಾರೆ. ಶಶಿರಾಜ್ ಕಾವೂರು, ಸುರೇಶ್ ಆರ್.ಎಸ್ ಅವರು ಸಾಹಿತ್ಯ ಒದಗಿಸಿದ್ದಾರೆ. ಇನ್ನೊಂದು ವಿಶೇಷ ಅಂದರೆ ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು, ಯಕ್ಷಷಕ್ರೇಶ್ವರ ಬಿರುದಾಂಕಿತ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಗುರು ಶಿಷ್ಯರಾಗಿ ಅಭಿನಯಿಸುವ ಮೂಲಕ ಭಾಗವತಿಕೆಯನ್ನು ನೀಡಿರುವ ಚಿತ್ರ ಇದಾಗಿದೆ. ಸಿನಿಮಾ ವಿ4 ಸ್ಟ್ರೀಮ್ ಒಟಿಟಿಯಲ್ಲಿ ಲಭ್ಯವಿದ್ದು, ಸಿನಿಪ್ರಿಯರು ನೋಡಿ ಆನಂದಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News