×
Ad

ಚಂದ್ರಶೇಖರ್ ಆಝಾದ್ ಸಹಿತ 500 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು

Update: 2020-10-05 20:21 IST

ಲಕ್ನೊ, ಅ.5: ಹತ್ರಸ್‌ನಲ್ಲಿ ದಂಡ ಪ್ರಕ್ರಿಯ ಸಂಹಿತೆಯ ಸೆಕ್ಷನ್ 144ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಹಾಗೂ ಇತರ ಸುಮಾರು 500 ವ್ಯಕ್ತಿಗಳ ವಿರುದ್ಧ ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿರುವುದಾಗಿ ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ.

ಆಝಾದ್ ಹಾಗೂ ಅವರ ಬೆಂಬಲಿಗರು ರವಿವಾರ ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು. ಆದರೆ ಈ ಭೇಟಿಯ ಸಂದರ್ಭ ಅವರು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಹಾಗೂ ಸೆಕ್ಷನ್ 144ರಡಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಪೊಲೀಸರು ಮನವಿ ಮಾಡಿಕೊಂಡರೂ ನಿರ್ಲಕ್ಷಿಸಿ ರಸ್ತೆಯಲ್ಲಿ ಧರಣಿ ಕುಳಿತು ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ.

ಧರಣಿಯನ್ನು ತೆರವುಗೊಳಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಾಯಿತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತೆಯ ಸಂಬಂಧಿಕರನ್ನು ರವಿವಾರ ಭೇಟಿಯಾಗಿದ್ದ ಆಝಾದ್, ಕುಟುಂಬದವರಿಗೆ ‘ವೈ’ ದರ್ಜೆಯ ಭದ್ರತೆ ಒದಗಿಸುವಂತೆ ಮತ್ತು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಸಂತ್ರಸ್ತೆಯ ಕುಟುಂಬದವರಿಗೆ ಇಲ್ಲಿ ಭದ್ರತೆಯಿಲ್ಲ. ಆದ್ದರಿಂದ ಸರಕಾರ ಅವರಿಗೆ ‘ವೈ’ ದರ್ಜೆಯ ಭದ್ರತೆ ಒದಗಿಸದಿದ್ದರೆ, ಅವರನ್ನು ತನ್ನ ಮನೆಗೆ ಕರೆದೊಯ್ಯುತ್ತೇನೆ. ನಟಿ ಕಂಗನಾ ರಣಾವತ್‌ಗೆ ‘ವೈ’ ದರ್ಜೆಯ ಭದ್ರತೆ ಒದಗಿಸಲು ಸಾಧ್ಯವಾಗುವುದಾದರೆ, ಸಂತ್ರಸ್ತೆಯ ಕುಟುಂಬದವರಿಗೆ ಯಾಕೆ ಸಾಧ್ಯವಾಗದು? ಎಂದು ಆಝಾದ್ ಪ್ರಶ್ನಿಸಿದ್ದರು. ಸಂತ್ರಸ್ತೆಯ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಹಥರಾಸ್ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News