ದಲಿತ ನಾಯಕನ ಹತ್ಯೆ ಪ್ರಕರಣ: ಆರ್‌ಜೆಡಿಯ ತೇಜ್‌ಪ್ರತಾಪ್, ತೇಜಸ್ವಿ ಯಾದವ್ ವಿರುದ್ಧ ಎಫ್‌ಐಆರ್
ಪಾಟ್ನಾ,ಅ.6: ಪೂರ್ನಿಯಾ ಜಿಲ್ಲೆಯಲ್ಲಿ ದಲಿತ ನಾಯಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಜನತಾದಳದ ನಾಯಕರಾದ ತೇಜಸ್ವಿ ಯಾದವ್, ತೇಜ ಪ್ರತಾಪ್ ಯಾದವ್ ವಿರುದ್ಧ ಬಿಹಾರ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ಪರಿಶಿಷ್ಟ ಜಾತಿ/ಪಂಗಡಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಶಕ್ತಿ ಮಲ್ಲಿಕ್‌ರನ್ನು ರವಿವಾರ ಬಿಹಾರದ ಪೂರ್ನಿಯಾ ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಸ್ಥಳದಿಂದ ಪೊಲೀಸರು ನಾಡಪಿಸ್ತೂಲ್ ಹಾಗೂ ಖಾಲಿಯಾದ ಕಾಡತೂಸನ್ನು ವಶಪಡಿಸಿಕೊಂಡಿದ್ದರು.
ಪೂರ್ನಿಯಾದ ಪೊಲೀಸ್ ಅಧೀಕ್ಷಕ ವಿಶಾಲ್ ಶರ್ಮಾ ಇಂದು ಹೇಳಿಕೆಯೊಂದನ್ನು ನೀಡಿದ್ದು ‘‘ ಮೃತರ ಪತ್ನಿ ಖುಶ್ಬೂ ದೇವಿ ಅವರು ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಹಾಗೂ ಇತರ ನಾಲ್ವರು ತನ್ನ ಪತಿಯ ಹತ್ಯೆಗೆ ಸಂಚು ರೂಪಿಸಿದ್ದರೆಂದು ಆರೋಪಿಸಿ ಅವರ ವಿರುದ್ಧ ಖಜಾಂಚಿ ಹಾಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ’’ಎಂದು ತಿಳಿಸಿದ್ದಾರೆ. ಕಾಲ್ಸೊ ಪವನ್, ಆತನ ಪತ್ನಿ ಸುನೀತಾ ದೇವಿ, ಅನಿಲ್ ಕುಮಾರ್ ಸಾಧು ಹಾಗೂ ಮನೋಜ್ ಪಾಸ್ವಾನ್ ಅವರು ಖುಶ್ಭೂ ದೇವಿ ಎಫ್‌ಐಆರ್‌ನಲ್ಲಿ ಹೆಸರಿಸಿದ ಇತರ ನಾಲ್ವರು ಆರೋಪಿಗಳಾಗಿದ್ದಾರೆ.
ಈ ಮೊದಲು ಎಲ್‌ಜೆಪಿ ಪಕ್ಷದಲ್ಲಿದ್ದ ಅನಿಲ್ ಕುಮಾರ್ ಸಾಧು ಹಾಗೂ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರ ಅಳಿಯ. ಆತ ಪ್ರಸಕ್ತ ಆರ್‌ಜೆಡಿಯ ಪರಿಶಿಷ್ಟ ಜಾತಿ/ಪಂಗಡದ ಹಾಲಿ ಅಧ್ಯಕ್ಷನಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆರ್‌ಜೆಡಿ ಟಿಕೆಟ್ ಬೇಕಾದರೆ 50 ಲಕ್ಷ ರೂ. ನೀಡುವಂತೆ ತನಗೆ ತೇಜಸ್ವಿಯಾದವ್ ಹಾಗೂ ಸಾಧು ಬೇಡಿಕೆಯಿಟ್ಟಿದ್ದರೆಂದು ಮೃತ ಮಲ್ಲಿಕ್ ಹೇಳಿರುವುದಾಗಿ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.