ಕಲ್ಲಿದ್ದಲು ಹಗರಣ: ಎನ್‌ಡಿಎ ಸರಕಾರದ ಮಾಜಿ ಸಚಿವನ ಅಪರಾಧ ಸಾಬೀತು
Update: 2020-10-06 20:21 IST
ಹೊಸದಿಲ್ಲಿ, ಅ.6: 1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಗಣಿಗಳ ಹಂಚಿಕೆ ಪ್ರಕರಣದಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದ ಕಲ್ಲಿದ್ದಲು ಹಗರಣದ ವಿಚಾರಣೆ ಪೂರ್ಣಗೊಳಿಸಿದ ದಿಲ್ಲಿಯ ವಿಶೇಷ ನ್ಯಾಯಾಲಯ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅಪರಾಧಿ ಎಂದು ಘೋಷಿಸಿದೆ.
ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ದಿಲೀಪ್ ರೇ ಕಲ್ಲಿದ್ದಲು ಇಲಾಖೆಯ ಸಹಾಯಕ ಸಚಿವರಾಗಿದ್ದರು. ಕಲ್ಲಿದ್ದಲು ಹಗರಣದಲ್ಲಿ ದಿಲೀಪ್ ರೇ, ಕಲ್ಲಿದ್ದಲು ಇಲಾಖೆಯ ಆಗಿನ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್, ಕ್ಯಾಸ್ಟ್ರನ್ ಟೆಕ್ನಾಲಜೀಸ್ ಲಿ.ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್‌ವಾಲ್ ಹಾಗೂ ಕ್ಯಾಸ್ಟ್ರನ್ ಮೈನಿಂಗ್ ಲಿ. ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಒಳಸಂಚು ಮತ್ತು ಇತರ ಆರೋಪಗಳು ಸಾಬೀತಾಗಿವೆ ಎಂದು ವಿಶೇಷ ನ್ಯಾಯಾಲಯ ತಿಳಿಸಿದೆ.
ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 14ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.