ಎಡರಂಗದ ಹಿರಿಯ ನಾಯಕರಿಂದ ಹತ ಯುವತಿಯ ಕುಟುಂಬದ ಭೇಟಿ, ನ್ಯಾಯಾಂಗ ವಿಚಾರಣೆಗೆ ಆಗ್ರಹ

Update: 2020-10-06 15:16 GMT

ಲಕ್ನೋ,ಅ.6: ಎಡರಂಗದ ಹಿರಿಯ ನಾಯಕರು ಹತ್ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಯುವತಿಯ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಸೀತಾರಾಮ ಯೆಚೂರಿ ಮತ್ತು ಬೃಂದಾ ಕಾರಟ್ (ಸಿಪಿಎಂ),ಡಿ.ರಾಜಾ, ಅಮರಜೀತ್ ಕೌರ್ ಮತ್ತು ಡಾ.ಗಿರೀಶ ಶರ್ಮಾ(ಸಿಪಿಐ) ತಂಡದಲ್ಲಿದ್ದರು.

 ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯೆಚೂರಿ,‘ಕುಟುಂಬಕ್ಕೆ ಸಾಂತ್ವನ ಹೇಳಲು ನಾವಿಲ್ಲಿಗೆ ಬಂದಿದ್ದೇವೆ. ಪ್ರಕರಣದ ಕುರಿತು ಸರಕಾರಿ ನೇತೃತ್ವದ ಸಂಸ್ಥೆಯಿಂದ ವಿಚಾರಣೆಯ ಬದಲಾಗಿ ನ್ಯಾಯಾಂಗ ವಿಚಾರಣೆ ನಡೆಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ’ ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣದ ಕುರಿತು ಕುಟಿಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ರಾಜಾ,ದಲಿತ ಕುಟುಂಬಗಳನ್ನು ಮನುಷ್ಯರಂತೆ ನಡೆಸಿಕೊಳ್ಳಲಾಗುತ್ತಿಲ್ಲ. ಅವರಿಗೆ ಘನತೆ ಮತ್ತು ಸಾಂವಿಧಾನಿಕ ಹಕ್ಕುಗಳು ದೊರೆಯಬೇಕು ಎಂದು ಹೇಳಿದರು.

ಪ್ರಕರಣವು ರಾಷ್ಟ್ರಾದ್ಯಂತ ಆಕ್ರೋಶವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ಸರಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.

ಜಾತಿ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಆರೋಪದಲ್ಲಿ ಉ.ಪ್ರ.ಸರಕಾರವು ಸೋಮವಾರ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 19 ಪ್ರಕರಣಗಳು ದೇಶದ್ರೋಹ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳನ್ನೂ ಒಳಗೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News