ಮುಂಬರುವ ಹಬ್ಬಗಳ ಋತುವಿಗೆ ಕೋವಿಡ್ ಶಿಷ್ಟಾಚಾರ ಪ್ರಕಟ

Update: 2020-10-06 15:52 GMT

ಹೊಸದಿಲ್ಲಿ,ಅ.6: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಈ ವರ್ಷವು ವಿಭಿನ್ನವಾಗಿದೆ,ಅಂತೆಯೇ ಮುಂಬರುವ ಹಬ್ಬಗಳನ್ನೂ ವಿಭಿನ್ನವಾಗಿಯೇ ಆಚರಿಸಬೇಕಾಗಿದೆ. ಮುಂಬರುವ ಹಬ್ಬಗಳ ಋತುವಿಗಾಗಿ ಕೇಂದ್ರ ಸರಕಾರವು ಮಂಗಳವಾರ ಕೋವಿಡ್ ಶಿಷ್ಟಾಚಾರಗಳನ್ನು ಬಿಡುಗಡೆಗೊಳಿಸಿದೆ.

ಎಲ್ಲ ಕಾರ್ಯಕ್ರಮಗಳು ವಿ ಭಿನ್ನ ಸಮಯಗಳು ಮತ್ತು ನಿರ್ಬಂಧಿತ ಪ್ರವೇಶಾವಕಾಶಗಳೊಂದಿಗೆ ಪೂರ್ವಯೋಜಿತವಾಗಿರಬೇಕು. ಸುರಕ್ಷಿತ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ನೆಲದ ಮೇಲೆ ಗುರುತುಗಳನ್ನು ಮಾಡಬೇಕು. ಉತ್ಸವಗಳ ಸಂಘಟಕರು ಸಾಕಷ್ಟು ಸ್ಯಾನಿಟೈಸರ್‌ಗಳು ಮತ್ತು ಥರ್ಮಲ್ ಗನ್‌ಗಳನ್ನು ವ್ಯವಸ್ಥೆ ಮಾಡಿರಬೇಕು. ಕೋವಿಡ್ ಶಂಕಿತರು ಪತ್ತೆಯಾದರೆ ವೈದ್ಯರು ಆಗಮಿಸಿ ತಪಾಸಣೆ ನಡೆಸುವವರೆಗೆ ಅವರ ಐಸೋಲೇಷನ್‌ಗಾಗಿ ಪ್ರತಿ ಕಾರ್ಯಕ್ರಮದ ಸ್ಥಳದಲ್ಲಿ ಪ್ರತ್ಯೇಕ ಜಾಗವನ್ನು ನಿಗದಿಗೊಳಿಸಬೇಕು. ವರದಿ ಪಾಸಿಟಿವ್ ಆಗಿದ್ದರೆ ಆವರಣವನ್ನು ಸೋಂಕುಮುಕ್ತಗೊಳಿಸಬೇಕು ಮತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಸುರಕ್ಷಿತ ಅಂತರ ನಿಯಮ ಪಾಲನೆಯ ಮೇಲೆ ನಿಗಾಯಿರಿಸಲು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಿರುತ್ತದೆ.

ಜನರಿಂದ ಸುರಕ್ಷಿತ ಅಂತರ ನಿಯಮ ಪಾಲನೆ ಮತ್ತು ಮಾಸ್ಕ್ ಧಾರಣೆಯ ಬಗ್ಗೆ ಕಾಳಜಿಯನ್ನು ವಹಿಸಬೇಕು. ರ್ಯಾಲಿಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಅವು ಸಾಗುವ ಮಾರ್ಗ,ವಿಗ್ರಹ ವಿಸರ್ಜನಾ ತಾಣಗಳು,ಸೀಮಿತ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಸುರಕ್ಷಿತ ಅಂತರ ಕುರಿತು ಮೊದಲೇ ಯೋಜನೆ ಹಾಕಿಕೊಳ್ಳಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಧ್ಯವಾದಷ್ಟು ಮಟ್ಟಿಗೆ ಕನಿಷ್ಠ ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಫೇಸ್ ಕವರ್‌ಗಳು ಮತ್ತು ಮಾಸ್ಕ್‌ಗಳು ಕಡ್ಡಾಯವಾಗಿದ್ದು,ಉಗುಳುವುದರ ಮೇಲಿನ ನಿಷೇಧ ಮುಂದುವರಿಯುತ್ತದೆ. ಜನರು ಆರೋಗ್ಯ ಸೇತು ಆ್ಯಪ್ ಬಳಸುವಂತೆ ಸರಕಾರವು ಸಲಹೆ ನೀಡಿದೆ. ಧಾರ್ಮಿಕ ಸ್ಥಳಗಳಲ್ಲಿ ವಿಗ್ರಹಗಳು,ದೇವರ ಮೂರ್ತಿಗಳು ಮತ್ತು ಪವಿತ್ರ ಗ್ರಂಥಗಳನ್ನು ಸ್ಪರ್ಶಿಸಲು ಅವಕಾಶವಿಲ್ಲ. ಸೋಂಕು ಹರಡುವ ಸಂಭಾವ್ಯ ಬೆದರಿಕೆಯ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಭಜನಾ ಮಂಡಳಿಗಳಿಗೆ ಅವಕಾಶ ನೀಡದೆ ಮುದ್ರಿತ ಭಕ್ತಿ ಸಂಗೀತ/ಹಾಡುಗಳನ್ನು ನುಡಿಸಬೇಕು. ಕಾರ್ಯಕ್ರಮದ ಸ್ಥಳಗಳಲ್ಲಿಯ ಪಾಕಶಾಲೆಗಳಲ್ಲಿ ಆಹಾರಗಳನ್ನು ಸಿದ್ಧಗೊಳಿಸುವಾಗ ಮತ್ತು ವಿತರಿಸುವಾಗ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಪಾಕಶಾಲೆಗಳಲ್ಲಿ ಮತ್ತು ಭೋಜನ ಸ್ಥಳಗಳಲ್ಲಿ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸಾರ್ವಜನಿಕ ಬಳಕೆಯ ಸಾಮಾನ್ಯ ಪ್ರದೇಶಗಳಲ್ಲಿ ಆಗಾಗ್ಗೆ ಸ್ಪರ್ಶಿಸಲಾಗುವ ಬಾಗಿಲ ಹಿಡಿಕೆಗಳು,ಲಿಫ್ಟ್ ಗುಂಡಿಗಳು, ಆಸನಗಳಂತಹ ಮೇಲ್ಮೈಗಳನ್ನು ಶೇ.1 ಸೋಡಿಯಂ ಹೈಪೊಕ್ಲೋರೈಟ್ ಬಳಸಿ ನಿಯಮಿತವಾಗಿ ಸ್ವಚ್ಛ ಮತ್ತು ಸೋಂಕುಮುಕ್ತಗೊಳಿಸುತ್ತಿರಬೇಕು. ಜನರು ಮತ್ತು ಸಿಬ್ಬಂದಿಗಳು ಬಳಸಿದ ಮಾಸ್ಕ್‌ಗಳನ್ನು ಹಾಕಲು ಸೂಕ್ತ ವ್ಯವಸ್ಥೆಯನ್ನು ಮಾಡಿರಬೇಕು.

ಕಾರ್ಯಕ್ರಮಗಳಿಗೆ ಸೀಮಿತ ಸಂಖ್ಯೆಯ ಜನರಿಗೆ ಪ್ರವೇಶಾವಕಾಶವಿರಬೇಕು. ಪೆಂಡಾಲ್‌ಗಳು, ಭೋಜನಶಾಲೆಗಳು, ಆವರಣದಲ್ಲಿನ ಮತ್ತು ಹೊರಗಿನ ಅಂಗಡಿಗಳು ಮತ್ತು ಹೋಟೆಲ್‌ಗಳಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಸುರಕ್ಷಿತ ಕುಡಿಯುವ ನೀರು ಮತ್ತು ಸ್ಥಳದಲ್ಲಿ ಸರಿಯಾಗಿ ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು. ಧಾರ್ಮಿಕ ಸ್ಥಳಗಳನ್ನು ಶೂ ಮತ್ತು ಚಪ್ಪಲಿಗಳನ್ನು ಧರಿಸಿಕೊಂಡು ಪ್ರವೇಶಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News