ಹತ್ರಸ್: ಸಂಬಂಧಿಯಿಂದಲೇ ಅತ್ಯಾಚಾರಕ್ಕೀಡಾದ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಮೃತ
ಹೊಸದಿಲ್ಲಿ: ಹತ್ರಸ್ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಆಕ್ರೋಶ ತಣ್ಣಗಾಗುವ ಮೊದಲೇ ಜಿಲ್ಲೆಯ ನಾಲ್ಕು ವರ್ಷದ ಬಾಲಕಿಯ ಮೇಲೆ ಸಂಬಂಧಿಕನೇ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ನಡೆದಿದ್ದು, ಬಾಲಕಿಯು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ದಿಲ್ಲಿ ಪೊಲೀಸರು ಮಂಗಳವಾರ ತಿಳಿಸಿದರು.
ಕೃತ್ಯಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕನನ್ನು ಅಲಿಗಢ ಜಿಲ್ಲೆಯ ಇಗ್ಲಾಸ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಾಲಕನ ತಾಯಿ ಹಾಗೂ ಸಂತ್ರಸ್ತೆ ಬಾಲಕಿಯ ಚಿಕ್ಕಮ್ಮ ಕೂಡ ಅಪರಾಧದಲ್ಲಿ ಭಾಗಿಯಾಗಿದ್ದು, ಈ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಸಾಮಾಜಿಕ ಸಂಘಟನೆ ನೀಡಿದ ದೂರಿನ ಮೇರೆಗೆ ಸಂತ್ರಸ್ತೆಯ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಲಾಗಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಜಿ. ಹೇಳಿದ್ದಾರೆ.
ಬಾಲಕಿಯನ್ನು ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ದಿನಗಳ ಹಿಂದಿನ ತನಕವೂ ಚಿಕಿತ್ಸೆ ನೀಡಲಾಗಿತ್ತು. ಬಾಲಕಿಯ ಸ್ಥಿತಿ ಹದಗೆಟ್ಟ ಬಳಿಕ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸೋಮವಾರ ಬಾಲಕಿ ಮೃತಪಟ್ಟಿದ್ದು, ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.
.