×
Ad

ಕಪ್ಪು ಕುಳಿಗಳ ಕುರಿತ ಸಂಶೋಧನೆ: ಮೂವರಿಗೆ ಭೌತಶಾಸ್ತ್ರ ನೊಬೆಲ್

Update: 2020-10-06 21:16 IST

ಸ್ಟಾಕ್‌ಹೋಮ್ (ಸ್ವೀಡನ್), ಅ. 6: ಕಪ್ಪು ಕುಳಿಗಳ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ ಬ್ರಿಟನ್‌ನ ರೋಜರ್ ಪೆನ್‌ರೋಸ್, ಜರ್ಮನಿಯ ರೈನ್‌ಹಾರ್ಟ್ ಗೆಂಝೆಲ್ ಮತ್ತು ಅಮೆರಿಕದ ಆ್ಯಂಡ್ರಿಯಾ ಗೇಝ್‌ರಿಗೆ 2020ರ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಮಂಗಳವಾರ ಘೋಷಿಸಲಾಗಿದೆ.

‘‘ವಿಶ್ವದ ಮಹೋನ್ನತ ವಿದ್ಯಮಾನಗಳ ಪೈಕಿ ಒಂದಾಗಿರುವ ಕಪ್ಪು ಕುಳಿಗಳ ಬಗ್ಗೆ ಮಾಡಿರುವ ಸಂಶೋಧನೆಗಳಿಗಾಗಿ ಈ ಭೌತವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’’ ಎಂದು ನೊಬೆಲ್ ಸಮಿತಿ ತಿಳಿಸಿದೆ.

ಸಾಮಾನ್ಯ ಸಾಪೇಕ್ಷ ಸಿದ್ಧಾಂತ (ಜನರಲ್ ತಿಯರಿ ಆಫ್ ರೆಲಟಿವಿಟಿ)ವು ಕಪ್ಪು ಕುಳಿಗಳ ರಚನೆಗೆ ಕಾರಣವಾಗುತ್ತವೆ ಎನ್ನುವುದನ್ನು ತೋರಿಸಿಕೊಟ್ಟಿರುವುದಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ 89 ವರ್ಷದ ಪೆನ್‌ರೋಸ್‌ಗೆ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಆಯ್ಕೆ ಮಂಡಳಿ ಹೇಳಿದೆ.

ಅದೇ ವೇಳೆ, ನಮ್ಮ ಆಕಾಶಗಂಗೆ (ಗೆಲಾಕ್ಸಿ)ಯ ಕೇಂದ್ರ ಬಿಂದುವಿನಲ್ಲಿರುವ ನಕ್ಷತ್ರಗಳ ಕಕ್ಷೆಗಳನ್ನು ಅಗೋಚರ ಹಾಗೂ ಅತ್ಯಂತ ಭಾರದ ವಸ್ತುವೊಂದು ನಿಯಂತ್ರಿಸುತ್ತದೆ ಎನ್ನುವುದನ್ನು ಪತ್ತೆಹಚ್ಚಿರುವುದಕ್ಕಾಗಿ 68 ವರ್ಷದ ಗೆಂಝೆಲ್ ಮತ್ತು 55 ವರ್ಷದ ಗೇಝ್‌ಗೆ ಜಂಟಿಯಾಗಿ ಪ್ರಶಸ್ತಿ ನೀಡಲಾಗಿದೆ.

ಕಪ್ಪು ಕುಳಿಯೆನ್ನುವುದು ಬಾಹ್ಯಾಕಾಶದ ಒಂದು ಭಾಗವಾಗಿದ್ದು, ಅಲ್ಲಿನ ದ್ರವ್ಯವು ಎಷ್ಟು ಒತ್ತೊತ್ತಾಗಿ ಬೆಸೆದುಕೊಂಡಿದೆಯೆಂದರೆ, ಅದರಿಂದಾಗಿ ಉದ್ಭವಿಸಿರುವ ಗುರುತ್ವ ಕ್ಷೇತ್ರದಿಂದ ತಪ್ಪಿಸಿಕೊಳ್ಳಲು ಬೆಳಕಿಗೂ ಸಾಧ್ಯವಾಗುವುದಿಲ್ಲ.

ಗೆಂಝೆಲ್ ಜರ್ಮನಿಯ ಗಾರ್ಚಿಂಗ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಎಕ್ಸ್‌ಟ್ರಾಟೆರ್ರೆಸ್ಟ್ರಿಯಲ್ ಫಿಸಿಕ್ಸ್ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಜೊತೆ ನಂಟು ಹೊಂದಿದ್ದಾರೆ.

10 ಮಿಲಿಯ ಸ್ವೀಡಿಶ್ ಕ್ರೋನರ್ (ಸುಮಾರು 8 ಕೋಟಿ ರೂಪಾಯಿ) ಬಹುಮಾನ ಮೊತ್ತವನ್ನು ಮೂವರು ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿಯ ಅರ್ಧ ಭಾಗ ಪೆನ್‌ರೋಸ್‌ಗೆ ಹೋದರೆ, ಉಳಿದರ್ಧವನ್ನು ಗೆಂಝೆಲ್ ಮತ್ತು ಗೇಝ್ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಭೌತಶಾಸ್ತ್ರ ನೊಬೆಲ್ ಪಡೆದ 4ನೇ ಮಹಿಳೆ

1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಯನ್ನು ವಿತರಿಸಿದ ಬಳಿಕ, ಭೌತಶಾಸ್ತ್ರದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ನಾಲ್ಕನೇ ಮಹಿಳೆ ಆ್ಯಂಡ್ರಿಯಾ ಗೇಝ್ ಆಗಿದ್ದಾರೆ.

‘‘ಈ ಕ್ಷೇತ್ರವನ್ನು ಯುವ ಮಹಿಳೆಯರು ಆರಿಸಿಕೊಳ್ಳುವಂತೆ ಅವರಿಗೆ ಪ್ರೇರಣೆಯಾಗುವ ಭರವಸೆ ನನಗಿದೆ’’ ಎಂದು ಪ್ರಶಸ್ತಿ ಘೋಷಣೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News