ತಾನು ಉತ್ಪಾದಿಸಿರುವ ಕೊರೋನ ಲಸಿಕೆಯ ವಿಶ್ಲೇಷಣೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಮನವಿ

Update: 2020-10-06 16:21 GMT

ಸಿಂಗಾಪುರ, ಅ. 6: ತಾನು ಉತ್ಪಾದಿಸಿರುವ ಕೊರೋನ ಲಸಿಕೆಯನ್ನು ವಿಶ್ಲೇಷಣೆಗೆ ಒಳಪಡಿಸುವಂತೆ ಚೀನಾವು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

 ಲಸಿಕೆಯನ್ನು ಅಂತರ್‌ರಾಷ್ಟ್ರೀಯ ಬಳಕೆಗೆ ಬಿಡುಗಡೆಗೊಳಿಸುವುದಕ್ಕೆ ಮುನ್ನ ಚೀನಾವು ಈ ಕ್ರಮವನ್ನು ತೆಗೆದುಕೊಂಡಿದೆ.

ಚೀನಾದ ಲಸಿಕೆಯ ಕ್ಲಿನಿಕಲ್ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ, ದೇಶದಲ್ಲಿ ಸೋಂಕಿಗೆ ಒಳಗಾಗುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿರುವ ವಿವಿಧ ಗುಂಪುಗಳಿಗೆ ಲಸಿಕೆಗಳನ್ನು ಈಗಾಗಲೇ ನೀಡಲಾಗಿದೆ. ಈಗಾಗಲೇ ಸಾವಿರಾರು ಮಂದಿಗೆ ಅದನ್ನು ನೀಡಲಾಗಿದೆ ಎನ್ನಲಾಗಿದೆ.

ತುರ್ತು ಬಳಕೆಯ ಔಷಧಿಗಳ ಪಟ್ಟಿಯಲ್ಲಿ ತನ್ನ ಲಸಿಕೆಯನ್ನು ಸೇರ್ಪಡೆಗೊಳಿಸುವ ವಿಷಯದಲ್ಲಿ ಚೀನಾವು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಮಾತುಕತೆಗಳನ್ನು ನಡೆಸಿದೆ ಎಂದು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಔಷಧಗಳು ಮತ್ತು ಆರೋಗ್ಯ ತಂತ್ರಜ್ಞಾನಗಳ ಸಮನ್ವಯಕಾರ ಸೊಕೊರೊ ಎಸ್ಕಲೇಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News