ಹೀಗೊಬ್ಬ ಅಜ್ಞಾತ ಕವಿ : ಕಟ್ಟಪುಣಿ ಇಬ್ರಾಹಿಂ ಮುಕ್ರಿಕ

Update: 2020-10-08 16:36 GMT

ಇತ್ತೀಚೆಗೆ ಅಧ್ಯಯನವೊಂದರ ನಿಮಿತ್ತ ಕ್ಷೇತ್ರ ಕಾರ್ಯ ಮಾಡುತ್ತಿದ್ದೆ. ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಕೆಲ ಗೆಳೆಯರು ಸೋಮೇಶ್ವರ ಉಚ್ಚಿಲದ ಹಿರಿಯರೊಬ್ಬರ ಬಳಿಗೆ ಕರೆದೊಯ್ದರು.. ಸುಮಾರು ಎಂಬತ್ತರ ಆಜು ಬಾಜಿನವರಾದ ಆ ಹಿರಿಯರ ಜೊತೆಗೆ ಮಾತನಾಡುತ್ತಾ ಅವರೂ ಓರ್ವ ಕವಿಯೆಂಬುವುದು ತಿಳಿದು ಬಂತು. ಅವರೇ ಕಟ್ಟಪುಣಿ ಇಬ್ರಾಹಿಂ ಮುಕ್ರಿಕ.

ಇವರು ಸುಮಾರು ಅರ್ಧ ದಶಕಗಳ ಕಾಲ ತೊಕ್ಕೊಟ್ಟು ಬಳಿಯ ಕಲ್ಲಾಪು, ಕೆ.ಸಿ.ರೋಡ್ ಮುಂತಾದೆಡೆ ನಮಾಝಿಗೆ ಆಝಾನ್ ಕರೆಯುವ ಮುಅದ್ದಿನರಾಗಿ ಸೇವೆ ಸಲ್ಲಿಸಿದ್ದರು. ಸುತ್ತ ಮುತ್ತಲ ಮಸೀದಿಗಳಲ್ಲಿ ಧಾರ್ಮಿಕ ಪ್ರವಚನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದಾಗ ಸ್ವ ಇಚ್ಛೆಯಿಂದ ಅಲ್ಲಿಗೆ ಹೋಗಿ ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿದ್ದರು. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಮುಸ್ಲಿಂ ಜಮಾ‌ಅತ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಅರ್ಧ-ಮುಕ್ಕಾಲು ಗಂಟೆ ಹಾಡು ಹಾಡುವ ಪರಿಪಾಠವಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಪರಿಪಾಠ ಕಡಿಮೆಯಾಗಿದೆ. ಹಾಡು ಹಾಡುವುದರ ಮೂಲ ಉದ್ದೇಶ ಇನ್ನು ಸ್ವಲ್ಪ ಹೊತ್ತಿನಲ್ಲಿ ಪ್ರವಚನ ಪ್ರಾರಂಭವಾಗಲಿದೆ ಎಂದು ದೂರದಲ್ಲಿರುವ ಜನರಿಗೆ ಮುನ್ಸೂಚನೆ ಕೊಡುವುದು. ಬೈತ್ (ಹಾಡು) ಶುರುವಾಯಿತು, ಪ್ರವಚನಕ್ಕೆ ಹೋಗೋಣ ಎಂದು ವ್ಯಾಪಾರಿಗಳು ಅಂಗಡಿ ಮುಚ್ಚಿ ಮಸೀದಿಯತ್ತ ತೆರಳುತ್ತಿದ್ದರು, ಮಹಿಳೆಯರು ಮಕ್ಕಳಿಗೆ ಲಗುಬಗನೇ ಊಟ ಮಾಡಿಸಿ, ಬಟ್ಟೆ ಹಾಕಿ ಮಸೀದಿಯತ್ತ ಹೆಜ್ಜೆ ಹಾಕುತ್ತಿದ್ದರು. ಸಭಿಕರ ಆಸನಗಳು ಭರ್ತಿಯಾಗುವವರೆಗೆ ಬೈತ್ ಹಾಡುತ್ತಿರುತ್ತಾರೆ. ಆಸನಗಳು ಭರ್ತಿಯಾದ ಕೂಡಲೇ ಬೈತ್ ನಿಲ್ಲಿಸಿ ಪ್ರವಚನ ಪ್ರಾರಂಭಿಸಲಾಗುತ್ತಿತ್ತು.

ಹಾಗೆ ಧಾರ್ಮಿಕ ಪ್ರವಚನಗಳು ನಡೆಯುತ್ತಿದ್ದ ಉಚ್ಚಿಲದ ಸುತ್ತ ಮುತ್ತಲ ಮಸೀದಿಗಳಲ್ಲಿ ಬೇರೆ ಬೇರೆ ಇಸ್ಲಾಮಿಕ್ ಬೈತ್‌ಗಳನ್ನು ಹಾಡುತ್ತಾ ತಾನೂ ಯಾಕೆ  ಬರೆಯಬಾರದು ಎಂದು ಕಾವ್ಯ ರಚನೆಗಿಳಿದವರು ಇಬ್ರಾಹಿಂ ಮುಕ್ರಿಕ. ಹಾಗೆ ತಾನು ಸ್ವತಃ ಕವನಗಳನ್ನು ಬರೆದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನದೇ ಹಾಡುಗಳನ್ನು ಹಾಡತೊಡಗಿದರು. ಬಳಿಕ ಮೀಲಾದುನ್ನಬೀ (ಪ್ರವಾದಿ ಜನ್ಮ ದಿನಾಚರಣೆ) ಸಂಧರ್ಭಗಳಲ್ಲಿ ಮದ್ರಸಾಗಳಲ್ಲಿ ನಡೆಯುತ್ತಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾನು ಬರೆದ ಹಾಡುಗಳನ್ನು ಮಕ್ಕಳಿಂದ ಹಾಡಿಸತೊಡಗಿದರು.

ಸ್ವತಃ ತಾನು ಬರೆದ ಕವನಗಳನ್ನು ಮತ್ತು ಇತರ ಅನಾಮಿಕ ಕವಿಗಳ ಅಥವಾ ಇಸ್ಲಾಮಿಕ್  ಜನಪದ ಹಾಡುಗಳನ್ನೆಲ್ಲಾ ಸಂಗ್ರಹಿಸಿ ಇಬ್ರಾಹಿಂ ಮುಕ್ರಿಕ ಒಂದು ಪುಟ್ಟ ಕೃತಿಯೊಂದನ್ನೂ ಹೊರತಂದಿದ್ದಾರೆ. "ಹೃದಯದ ಸವಿ ಕವಿತೆಗಳು" ಎಂಬ ಈ ಸಂಕಲನದಲ್ಲಿ ಇಬ್ರಾಹಿಂ ಮುಕ್ರಿಕರೇ ರಚಿಸಿದ ಹದಿನೇಳು ಕನ್ನಡ ಕವಿತೆಗಳು, ಎರಡು ಬ್ಯಾರಿ ಕವಿತೆಗಳು, ಐದು ಅನಾಮಿಕ ಕವಿಗಳ ಕನ್ನಡ ಕವಿತೆಗಳು, ಅನಾಮಿಕ ಕವಿಯೊಬ್ಬರ ಒಂದು ಮಲಾಮೆ ಕವಿತೆ, ಒಂದು ಮಲಯಾಳಂ ಭಾಷೆಯ ಸ್ವ ರಚಿತ ಕವಿತೆಯನ್ನು ಕನ್ನಡ ಲಿಪಿಯಲ್ಲಿ ಬರೆದಿದ್ದಾರೆ. ಇನ್ನೊಂದು ಮಲಯಾಳಂ  ಕವಿತೆಯನ್ನು ಅರಬಿ- ಮಲಯಾಳಂ ಸಂಯುಕ್ತ ಲಿಪಿಯಲ್ಲಿ ಬರೆದಿದ್ದಾರೆ.  ಲೀಡರ್ ನೀಯೆನ್ನೇ ಎಂಬ ಮಲಾಮೆ ಕವಿತೆಯನ್ನು ಅವರು ನಾಡಂ ಭಾಷಾ ಕವನ ಎಂದು ಉಲ್ಲೇಖಿಸಿದ್ದಾರೆ.

ಮೂಲತಃ ಅವರೋರ್ವ ಹಾಡುಗಾರನಾದುದರಿಂದ ಅವರು ಬೇರೆ ಬೇರೆ ಹಾಡುಗಳ ರಾಗದಲ್ಲಿ ಕವಿತೆ ರಚಿಸಿದ್ದಾರೆ.
ಅವುಗಳಲ್ಲಿ ಕನ್ನಡದ ಜನಪ್ರಿಯ ಬಾಲಗೀತೆಯಾದ ಗೋವಿನ ಹಾಡು (ಧರಣಿ ಮಂಡಲ) ಇದರ ರಾಗದಲ್ಲಿ ಬರೆದ ಪ್ರವಾದಿ (ಸ)ರ ಕೀರ್ತನೆ ಹಾಡು ಅತ್ಯಂತ ಸುಂದರವಾಗಿದೆ.
ಅದರ ಒಂದು ಚರಣ ನೋಡೋಣ.
"ಧರಣಿ ಮಧ್ಯದ ಬಿಂದುವಾಗಿಹ
ಅರಬಿ ದೇಶದ ಮಕ್ಕ ನಗರವು
ಪರಮ ನಬಿಯರು ಜನಿಸಿದಂತಹ
ಸುರ ಸ್ವರೂಪದ ತಾಣವು.."

ದರ್ಸ್ ಗಾನ ಎಂಬ ಕನ್ನಡ ಲಿಪಿ ಬಳಸಿ ಬರೆದ  ಮಲಯಾಳಂ ಭಾಷೆಯ ಹಾಡೊಂದನ್ನು ರಾಷ್ಟ್ರಗೀತೆಯ " ಜನಗಣ ಮನ" ಎಂಬ ರಾಗದಲ್ಲಿ ಬರೆದಿದ್ದಾರೆ.

ಪ್ರಸಿದ್ಧ ಇಸ್ಲಾಮೀ ಹಾಡುಗಳಾದ " ಹಸ್ಬೀ ರಬ್ಬಿ ಜಲ್ಲಲ್ಲಾಹ್, ಮಾಫೀ ಕಲ್ಬೀ ಗೈರುಲ್ಲಾಹ್" ಎಂಬ ರಾಗದಲ್ಲಿ, ಅಸ್ವಲಾತು ಅಲನ್ನಬೀ ಎಂಬ ರಾಗದಲ್ಲೆಲ್ಲಾ ಕನ್ನಡ ಕವನಗಳನ್ನು ರಚಿಸಿದ್ದಾರೆ.

ಈ ಕೃತಿಯಲ್ಲಿರುವ ಜ್ಞಾನ ಸಂದೇಶ ಸಾರುವ ಸ್ವರಾಕ್ಷರ ಎಂಬ ಬಾಲಗೀತೆಯೊಂದು ಅತ್ಯಂತ ಸುಂದರವಾಗಿದೆ. ಕನ್ನಡದ ಹದಿನೈದು (ಋ ಸೇರಿ) ಸ್ವರಾಕ್ಷರಗಳಲ್ಲಿ ಪ್ರತಿಯೊಂದನ್ನು ಗೆರೆಯನ್ನು ಪ್ರಾರಂಭಿಸುವ ಈ ಹಾಡೂ ಬಹಳ ಸುಂದರವಾಗಿದೆ.

ಆ ಬಾಲಗೀತೆ ಹೀಗಿದೆ...

"ಅಣ್ಣ ತಮ್ಮಂದಿರೆ ಅಕ್ಕ ತಂಗಿಯರೆ
ಆನಂದದಿ ಸೇರಿ ಕುಣಿಯೋಣ
ಇತರರಿಗೆಂದೂ ಕೇಡನು ಬಗೆಯದೆ
ಈರ್ಷೆಯ ಭಾವನೆ ತೊರೆಯೋಣ
ಉನ್ನತ ಕಾರ್ಯದಿ ಸತ್‌‌ಚಿಂತನೆ ಮಾಡುತ
ಊರ್ಜಿತ ಸ್ಥಿತಿಯನು ಹೊಂದೋಣ
ಋಜು ಪಥದಿಂದಲಿ ಸಾಧನೆಗೈಯುತ
ಎಲ್ಲ ಕಷ್ಟಗಳನು ಎದುರಿಸಿ ನಿಂತು
ಏಳ್ಗೆಯ ಪಥದಲಿ ಸಾಗೋಣ
ಐಸಿರಿ ಆಶೆಗೆ ಕಪಟವ ಮಾಡದೆ
ಒಳ್ಳೆಯ ಬದುಕನು ನಡೆಸೋಣ
ಓದುತ ಕಲಿಯುತ ಜ್ಞಾನವ ಪಡೆಯುತ
ಔದಾರ್ಯದಿ ಎಲ್ಲರ ಕಾಣೋಣ
ಅಂಜಿಕೆ ಬಿಟ್ಟು ಧೈರ್ಯದಿ ಬಾಳಿ
ಅಃ ಸಂತೋಷದಿ ನಲಿಯೋಣ."

ಇಂತಹ ವಿಶಿಷ್ಟ ಸೃಜನಶೀಲ ಸೃಷ್ಟಿ ಕ್ರಿಯೆಯಲ್ಲಿ ತೊಡಗಿಸಿಕೊಂಡ ಮುಕ್ರಿಕ ತನ್ನ ಈ ಇಳಿವಯಸ್ಸಲ್ಲೂ ಸುಮ್ಮನೆ ಕೂರುತ್ತಿಲ್ಲ.
ಬಹಳ ವರ್ಷಗಳ ಹಿಂದೆ ಯುನಾನಿ ವೈದ್ಯ  ಶಾಸ್ತ್ರದಲ್ಲಿ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್ ಎಂದು ನೋಂದಾಯಿಸಿದ್ದರು. ಈಗ ಮನೆಯಲ್ಲೇ ಕುಳಿತು ಯುನಾನಿ ವೈದ್ಯಕೀಯ ವೃತ್ತಿಯನ್ನೂ ನಿರ್ವಹಿಸುತ್ತಿದ್ದಾರೆ. ಅವರನ್ನು ಸಮಾಜ ಓರ್ವ ಮುಕ್ರಿಕ ಮತ್ತು ಹಾಡುಗಾರನೆಂದು ಮಾತ್ರ ಗುರುತಿಸಿದೆಯೇ ಹೊರತು ಅವರೊಳಗಿನ ಕವಿಗೆ ಮಾನ್ಯತೆ ಸಿಗದೇ ಇರುವುದು ಖೇದಕರ. ಆದರೆ ಸ್ವತಃ ಮುಕ್ರಿಕರಿಗೆ ಆ ಬಗ್ಗೆ ಯಾವ ಖೇದವೂ ಇಲ್ಲ. ನಾನು ಮಾನ್ಯತೆಗಾಗಿಯೋ , ಪ್ರಚಾರಕ್ಕಾಗಿಯೋ ಬರೆದವನಲ್ಲ. ನನ್ನ ಖುಷಿಗೆ, ಮದ್ರಸಾ ಮಕ್ಕಳ ಗಾಯನ ಪ್ರತಿಭೆ ಅರಳಿಸಲು ಬರೆದಿದ್ದೆ. ನನ್ನ ಪುಸ್ತಕ ಪ್ರಕಟಿಸಿ ಎಂದು  ಯಾವ ಪ್ರಕಾಶಕನ ಹಿಂದೆಯೂ ಹೋಗಿಲ್ಲ. ಇನ್ನು ಎಲ್ಲೆಲ್ಲೂ ಚದುರಿ ಹೋಗುವುದು ಬೇಡವೆಂದು ನಾನೇ ಹೀಗೆ ಸರಳವಾಗಿ ನನ್ನ ಕೃತಿಯನ್ನು ಅಚ್ಚು ಹಾಕಿಸಿದ್ದೇನೆ ಎನ್ನುತ್ತಾರೆ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News