ಶಾಸಕರ ಫೋನ್ ಕದ್ದಾಲಿಕೆ ವರದಿ: ರಾಜಸ್ಥಾನದ ಪತ್ರಕರ್ತರಿಬ್ಬರ ವಿರುದ್ಧ ಪ್ರಕರಣ

Update: 2020-10-07 15:26 GMT

ಜೈಪುರ,ಅ.7: ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬಂಡಾಯವು ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರವನ್ನು ಪತನದ ಅಂಚಿಗೆ ತಳ್ಳಿದ್ದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಫೋನ್‌ಗಳನ್ನು ಕದ್ದಾಲಿಸಲಾಗಿತ್ತು ಎಂದು ವರದಿ ಮಾಡಿದ್ದಕ್ಕಾಗಿ ಇಬ್ಬರು ಹಿರಿಯ ಪತ್ರಕರ್ತರ ವಿರುದ್ಧ ರಾಜಸ್ಥಾನ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಗೆಹ್ಲೋಟ್ ಬಣದ ಶಾಸಕರನ್ನು ‘ಕುದುರೆ ವ್ಯಾಪಾರ ’ದಿಂದ ರಕ್ಷಿಸಿಕೊಳ್ಳಲು ಕಳೆದ ಆಗಸ್ಟ್‌ನಲ್ಲಿ ಜೈಸಲ್ಮೇರ್‌ಗೆ ಸ್ಥಳಾಂತರಿಸಿದ ಬಳಿಕ ಅವರ ಫೋನ್‌ಗಳನ್ನು ಕದ್ದಾಲಿಸಲಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ,ಬಿಕ್ಕಟ್ಟು ಬಗೆಹರಿದು ಒಂದು ತಿಂಗಳಾದ ಬಳಿಕ ಈಗ ಪ್ರಕರಣ ದಾಖಲಾಗಿದೆ.

ಹಲವಾರು ಟಿವಿ ವಾಹಿನಿಗಳು ಮತ್ತು ಸ್ಥಳೀಯ ಮಾಧ್ಯಮ ಸಂಸ್ಥೆಗಳು ಫೋನ್ ಕದ್ದಾಲಿಕೆಯನ್ನು ವರದಿ ಮಾಡಿದ್ದವಾದರೂ ಪತ್ರಕರ್ತರಾದ ಶರತ್ ಕುಮಾರ್ ಮತ್ತು ಲೋಕೇಂದ್ರ ಸಿಂಗ್ ಅವರ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ತಪ್ಪು ಅಥವಾ ದೃಢೀಕೃತವಲ್ಲದ ಸುದ್ದಿಗಳನ್ನು ಹರಡಿದ ಮತ್ತು ಒಳಸಂಚು ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ.

 ಮಧ್ಯಪ್ರದೇಶದಲ್ಲಿ ವಿಧಾನಸಭಾ ಉಪಚುನಾವಣೆಗಾಗಿ ಕಾಂಗ್ರೆಸ್‌ನ ಪ್ರಚಾರದಲ್ಲಿ ತೊಡಗಿಕೊಂಡಿರುವ ಪೈಲಟ್ ಅವರ ಮಾಧ್ಯಮ ವರದಿಗಾರಿಕೆಯ ಗುತ್ತಿಗೆಯನ್ನು ಸಿಂಗ್ ಅವರ ಸುದ್ದಿಸಂಸ್ಥೆಯು ಪಡೆದುಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News