ದಿಲ್ಲಿ ಹಿಂಸಾಚಾರ ದೇಶದ ಶಾಂತಿಗೆ ಧಕ್ಕೆ ಉಂಟು ಮಾಡಿದ ‘ಅತಿ ದೊಡ್ಡ ಪಿತೂರಿ’: ನಿತ್ಯಾನಂದ ರಾಯ್

Update: 2020-10-07 16:17 GMT

ಹೊಸದಿಲ್ಲಿ, ಅ. 7: ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ಭುಗಿಲೆದ್ದ ಹಿಂಸಾಚಾರ ದೇಶದ ಶಾಂತಿ ಕದಡಲು ನಡೆಸಿದ ‘ಅತಿ ದೊಡ್ಡ ಪಿತೂರಿ’. ಆದರೆ, ‘ಅರಾಜಕತೆ ಹರಡುವ ದುಷ್ಕರ್ಮಿಗಳನ್ನು ನಿಗ್ರಹಿಸುವಲ್ಲಿ ಭದ್ರತಾ ಪಡೆ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಬುಧವಾರ ಹೇಳಿದ್ದಾರೆ.

ಗುರುಗ್ರಾಮದ ಕೇಂದ್ರ ಮೀಸಲು ಪಡೆ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯಪಡೆ ಅಥವಾ ಆರ್‌ಎಎಫ್ ತಂಡವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಈ ಹೇಳಿಕೆ ನೀಡಿದರು. ಆರ್‌ಎಎಫ್ ಸಿಬ್ಬಂದಿಯ ಪಥಸಂಚಲನ ಪರಿಶೀಲಿಸಿದ ರಾಯ್, ದೇಶದ ಶಾಂತಿಗೆ ಧಕ್ಕೆ ತಂದ ಗಲಭೆಕೋರರ ಸಂಚನ್ನು ಆರ್‌ಎಎಫ್ ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದರು. ‘‘ಗಲಭೆ ಹಾಗೂ ಪ್ರತಿಭಟನೆ ಸಂದರ್ಭ ನೀವು ಗಾಯಗಳಿಂದ ತೊಂದರೆಗೊಳಗಾಗುತ್ತೀರಿ. ಆದರೆ, ಸಮಾಜದ ಶಾಂತಿಗೆ ಧಕ್ಕೆ ಉಂಟು ಮಾಡುವ ಹಿಂಸಾತ್ಮಕ ಗುಂಪುಗಳ ಮೇಲೆ ಮಾತ್ರ ನೀವು ಪಡೆಯನ್ನು ಬಳಸುತ್ತೀರಿ’’ ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಶಾಂತಿ ಹಾಗೂ ಆಂತರಿಕ ಭದ್ರತೆ ಕಾಪಾಡುವುದು ಎರಡು ಮುಖ್ಯ ಅಂಶ ಎಂದು ಅವರು ನುಡಿದರು.

ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಹಾಗೂ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ಗಳನ್ನು ಕೊಂದು ಹಾಕಿದ ಸಿಆರ್‌ಪಿಎಫ್‌ನ ಸಿಬ್ಬಂದಿಯನ್ನು ಪ್ರಶಂಸಿಸಿದ ಅವರು, ಈ ಪ್ರದೇಶದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರ ಚಟುವಟಿಕೆಯನ್ನು ತಂಡ ತಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News