ಪಶ್ಚಿಮಬಂಗಾಳ ಸರಕಾರದ ವಿರುದ್ಧ ಬಿಜೆಪಿ ರ‍್ಯಾಲಿ: ಪ್ರತಿಭಟನಾಕಾರರು-ಪೊಲೀಸರ ನಡುವೆ ಘರ್ಷಣೆ

Update: 2020-10-08 15:46 GMT

ಕೋಲ್ಕತ್ತಾ, ಅ. 8: ಪಶ್ಚಿಮಬಂಗಾಳದ ಸೆಕ್ರೇಟರಿಯೇಟ್ ‘ನಬನ್ನಾ’ದ ಕಡೆಗೆ ಬಿಜೆಪಿ ಗುರುವಾರ ನಡೆಸಿದ ರ‍್ಯಾಲಿಯ ಸಂದರ್ಭ ಬ್ಯಾರಿಕೇಡ್‌ಗಳನ್ನು ನಿವಾರಿಸಿ ಮುನ್ನುಗ್ಗಿದ ಪ್ರತಿಭಟನಾಕಾರರು ಹಾಗೂ ಪಶ್ಚಿಮಬಂಗಾಳ ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಕೋಲ್ಕತ್ತಾ ಹಾಗೂ ಹೌರಾಹ್‌ನಿಂದ ‘ನಬನ್ನಾ’ ಕಡೆಗೆ ರ್ಯಾಲಿ ನಡೆಸಿದ್ದರು. ರ‍್ಯಾಲಿ ಸಂದರ್ಭ ಹೌರಾಹ್‌ನ ಸಾಂತ್ರಾಗಾಚಿಯಲ್ಲಿ ಘರ್ಷಣೆ ನಡೆದಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸೆಲ್ ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಿದರು. ಈ ಸಂದರ್ಭ ಪ್ರತಿಭಟನಕಾರನೋರ್ವನಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಬನ್ನಾ ಚಲೋ’ ಚಳವಳಿಯಲ್ಲಿ ಪಾಲ್ಗೊಳ್ಳಲು ಕೋಲ್ಕೊತ್ತಾದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಹೊರಗೆ ಸೇರಿದ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರ‍್ಯಾಲಿ ನಡೆಸಿದರು. ರ‍್ಯಾಲಿ ಹೌರಾಹ್ ಜಿಲ್ಲೆಯ ಸಾಂತ್ರಗಾಚಿಗೆ ತಲುಪುತ್ತಿದ್ದಂತೆ ಘರ್ಷಣೆ ನಡೆದಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ಅಶ್ರವಾಯು ಹಾಗೂ ಜಲ ಫಿರಂಗಿ ಪ್ರಯೋಗಿಸಿದರು. ಇದರಿಂದ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಹಾಗೂ ಸಂಸದ ಜ್ಯೋತಿರ್ಮಯ್ ಸಿಂಗ್ ಮಹತೊ ಗಾಯಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News