ಬಿಜೆಪಿ ಸಂಸದರಿಂದ ದ್ವೇಷ ಭಾಷಣ: ಆರೋಪ
ಹೊಸದಿಲ್ಲಿ, ಅ. 8: ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ದ್ವೇಷ ಭಾಷಣ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿಯ ಅವರ ಸಹೋದ್ಯೋಗಿ ಹಾಗೂ ಸಂಸದ ಪ್ರವೇಶ್ ವರ್ಮಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಗುರುವಾರ ಪ್ರತಿಪಾದಿಸಿದ್ದಾರೆ.
ಸಂಬಂಧಿತ ಪ್ರಾಧಿಕಾರವಾದ ಕೇಂದ್ರ ಸರಕಾರದಿಂದ ಅಗತ್ಯದ ಅನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಇಬ್ಬರು ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿ ಬೃಂದಾ ಕಾರಟ್ ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ಆಗಸ್ಟ್ 26ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬೃಂದಾ ಕಾರಟ್ ಈ ಮೇಲ್ಮನವಿ ಸಲ್ಲಿಸಿದ್ದಾರೆ.
ಮನವಿ ಆಲಿಸಿದ ಬಳಿಕ ನ್ಯಾಯಮೂರ್ತಿ ಯೋಗೇಶ್ ಖನ್ನಾ, ತಮ್ಮ ವಾದಕ್ಕೆ ಬೆಂಬಲವಾಗಿ ಸಂಬಂಧಿತ ತೀರ್ಪುಗಳನ್ನು ಸಲ್ಲಿಸುವಂತೆ ಬೃಂದಾ ಕಾರಟ್ ಹಾಗೂ ದಿಲ್ಲಿ ಪೊಲೀಸರ ಪರ ವಕೀಲರಿಗೆ ತಿಳಿಸಿದರು. ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು. ಪೊಲೀಸರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ರಿಚಾ ಕಪೂರ್, ಮನವಿಯ ಸಮರ್ಥನೀಯತೆಯನ್ನು ಪ್ರಶ್ನಿಸಿದರು. ಮನವಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ 9 ತಿಂಗಳು ಬಾಕಿ ಇರಿಸಲಾಗಿತ್ತು. ಅನಂತರ ಮ್ಯಾಜಿಸ್ಟ್ರೇಟ್ ಮನವಿಯನ್ನು ತಿರಸ್ಕರಿಸಿದರು. ಮನವಿಯ ಅರ್ಹತೆಯನ್ನು ಪರಿಶೀಲಿಸುವುದಕ್ಕೆ ಕೂಡ ಹೋಗಿಲ್ಲ ಎಂದು ಬೃಂದಾ ಕಾರಟ್ ಪರ ನ್ಯಾಯವಾದಿ ಸಿದ್ಧಾರ್ಥ್ ಅಗರ್ವಾಲ್ ಹೇಳಿದರು. ಬಿಜೆಪಿ ನಾಯಕರು ಸಂಜ್ಞೇಯ ಅಪರಾಧ ಮಾಡಿದ್ದಾರೆ ಹಾಗೂ ನಾವು ಈ ವಿಷಯದ ಕುರಿತು ಪೊಲೀಸ್ ತನಿಖೆ ನಡೆಸುವಂತೆ ಮಾತ್ರ ಮನವಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಅನುರಾಗ್ ಠಾಕೂರ್ ಹಾಗೂ ಪ್ರವೇಶ್ ವರ್ಮಾ ವಿರುದ್ಧ ಪಾರ್ಲಿಮೆಂಟ್ ಸ್ಟ್ರೀಟ್‌ನ ಪೊಲೀಸ್ ಠಾಣೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಸಿಪಿಎಂ ನಾಯಕರಾದ ಬೃಂದಾ ಕಾರಟ್ ಹಾಗೂ ಕೆ.ಎಂ. ತಿವಾರಿ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಪೂರ್ವಾನುಮತಿ ಇಲ್ಲದೆ ಮನವಿ ಸಲ್ಲಿಕೆ ಸಮರ್ಥನೀಯವಲ್ಲ ಎಂದು ವಿಚಾರಣಾ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು.