×
Ad

ತನ್ನ ಕಂಪೆನಿಯಲ್ಲಿ ನಡೆದ 6 ಬಿಲಿಯನ್ ಡಾಲರ್ ವಂಚನೆಯ ತನಿಖೆ ಸಿಬಿಐ, ಈ.ಡಿ. ನಡೆಸುವಂತೆ ಕೋರಿ ಬಿ.ಆರ್. ಶೆಟ್ಟಿ ದೂರು

Update: 2020-10-08 21:46 IST

ಹೊಸದಿಲ್ಲಿ, ಅ. 8: ಬ್ಯಾಂಕರ್‌ಗಳೊಂದಿಗೆ ನಿರ್ಲಜ್ಜವಾಗಿ ಕೈಜೋಡಿಸುವ ಮೂಲಕ ತನ್ನ ಕಂಪೆನಿಗಳ ಮಾಜಿ ಉನ್ನತ ಅಧಿಕಾರಿಗಳು ನಡೆಸಿರುವ 6 ಬಿಲಿಯನ್ ಡಾಲರ್ (43993.77 ಕೋಟಿ ರೂಪಾಯಿ) ವಂಚನೆ ಪ್ರಕರಣದ ತನಿಖೆ ನಡೆಸಲು ಯುಎಇ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಭಾರತೀಯ ತನಿಖಾ ಸಂಸ್ಥೆಗಳ ನೆರವು ಕೋರಿದ್ದಾರೆ.

ಆಸ್ಪತ್ರೆಗಳ ಸರಣಿಯಾದ ಎನ್‌ಎಂಸಿ ಹೆಲ್ತ್ ಕೇರ್ ಹಾಗೂ ಯುಎಇ ಎಕ್ಸ್‌ಚೇಂಜ್‌ನ ಸ್ಥಾಪಕ ಬಿ.ಆರ್. ಶೆಟ್ಟಿ ಅವರು ಪ್ರಸ್ತುತ ಭಾರತದಲ್ಲಿದ್ದು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಇದರ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಗಂಭೀರ ವಂಚನೆ ತನಿಖಾ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ತನ್ನ ಕಂಪೆನಿಯ ಮಾಜಿ ಮುಖ್ಯ ಅಧಿಕಾರಿಗಳಾದ ಪ್ರಶಾಂತ್ ಮಾಂಘಾಟ್ ಹಾಗೂ ಅವರ ಸಹೋದರ ಪ್ರಮೋತ್ ಮಾಂಘಾಟ್ ನಡೆಸಿದ ಹಣ ದುರುಪಯೋಗ, ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಪ್ರಶಾಂತ್ ಮಾಂಘಾಟ್ ಹಾಗೂ ಪ್ರಮೋತ್ ಮಾಂಘಾಟ್ ಬ್ಯಾಂಕರ್‌ಗಳು ಹಾಗೂ ಲೆಕ್ಕ ಪರಿಶೋಧಕರೊಂದಿಗೆ ಕೈಜೋಡಿಸಿ ಬಿಲಿಯನ್ ಡಾಲರ್ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರಮೋತ್ ಮಾಂಘಾಟ್ ಅವರು ಫಿನಾಬ್ಲರ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಮಾರ್ಚ್‌ನಲ್ಲಿ ಕೆಳಗಿಳಿದಿದ್ದರು. ಪ್ರಶಾಂತ್ ಮಾಂಘೋಟ್ ಅವರನ್ನು ಎನ್‌ಎಂಸಿ ಹೆಲ್ತ್‌ನ ಮಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಫೆಬ್ರವರಿಯಲ್ಲಿ ವಜಾಗೊಳಿಸಲಾಗಿತ್ತು. ತನ್ನ ದೂರಿನಲ್ಲಿ ಇತರ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರು ಹೇಳಿರುವ ಬಿ.ಆರ್. ಶೆಟ್ಟಿ, ಮಾಜಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.

ಇದು ಕಾನೂನು ವ್ಯಾಪ್ತಿಯ ವಿಷಯವಾದುದರಿಂದ ಭಾರತದ ತನಿಖಾ ಸಂಸ್ಥೆಗೆ ಈ ಬಗ್ಗೆ ತನಿಖೆ ನಡೆಸಲು ಅವಕಾಶ ಇದೆಯೇ ಎಂಬ ಬಗ್ಗೆ ಇದುವರೆಗೆ ಸ್ಪಷ್ಟವಾಗಿಲ್ಲ. ಬಿ.ಆರ್. ಶೆಟ್ಟಿ ಅವರ ದೂರಿಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇನ್ನಷ್ಟೇ ಹಿಂಬರಹ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News