ಅಜ್ಜಿ ತುಳಿದ ಆ ಹಾದಿಯಲ್ಲಿ...

Update: 2020-10-08 19:30 GMT

ಇಂದಿರಾಗಾಂಧಿ ಬಾಲ್ಯದಿಂದಲೂ ಒಂದಲ್ಲ ಒಂದು ರೀತಿಯ ಒಂಟಿತನವನ್ನು ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಅವರು ಸುದೀರ್ಘ ಜೈಲುವಾಸ. ಇಂತಹ ಸಂದರ್ಭಗಳಲ್ಲಿ ತಾಯಿ ಕಮಲಾ ನೆಹರೂ ಅವರ ಜೊತೆ ಇಂದಿರಾ ಅನುಭವಿಸಿದ ಆತಂಕದ ಕ್ಷಣಗಳು, ಫಿರೋಝ್‌ಗಾಂಧಿಯವರೊಡನೆ ವಿವಾಹದ ನಂತರ ಸೃಷ್ಟಿಯಾದ ವೈವಾಹಿಕ ಸಂಘರ್ಷಗಳ ಪರಿಣಾಮ ಕಾಡಿದ ಏಕಾಂಗಿತನ. ಸಂಜಯ್‌ಗಾಂಧಿ ಅಕಾಲಿಕ ಮರಣದ ಪರಿಣಾಮ ಇಂದಿರಾಗಾಂಧಿ ಅನುಭವಿಸಿದ ಗಂಭೀರ ವ್ಯಾಕುಲತೆ ಅವರ ವ್ಯಕ್ತಿತ್ವದಲ್ಲಿ ಒಂದು ರೀತಿಯ ಆಕ್ರಮಣಕಾರಿ ಮನಸ್ಥಿತಿಗೆ ಕಾರಣವಾಗುತ್ತಿದ್ದವು. ಆದರೆ ಇಂತಹ ಆಕ್ರಮಣಕಾರಿ ವ್ಯಕ್ತಿತ್ವದ ಒಡಲೊಳಗೆ ಬೇರುಬಿಟ್ಟ ಅಭದ್ರತೆ, ಆತಂಕದ ಕಾರಣದಿಂದ ಬದುಕು ಸಾಕು ಎಂದು ಉದ್ಗರಿಸಿದ ಗಂಭೀರ ಕ್ಷಣಗಳೂ ಇದ್ದವು. ಇಂದಿರಾ ಅವರಲ್ಲಿ ಅಂತರ್ಗತವಾಗಿದ್ದ ಚಿಂತನೆಗಳು, ಒಳನೋಟಗಳು, ದ್ವೇಷ ಹಾಗೂ ಪೂರ್ವಾಗ್ರಹಗಳು, ಆಕ್ರಮಣಕಾರಿ ಮನಃಸ್ಥಿತಿ ಮತ್ತು ಮುಗ್ಧತೆ, ಅವರ ಪ್ರೀತಿ ಮತ್ತು ಭಾವನಾತ್ಮಕ ಸಂಘರ್ಷಗಳು, ಅದರಿಂದ ಘಟಿಸುತ್ತಿದ್ದ ಪರಿಣಾಮಗಳು, ಇವೆಲ್ಲದರ ಒಂದು ಮುಖ ಮಾತ್ರ ಜಗತ್ತಿಗೆ ಗೊತ್ತಿದೆ. ಆದರೆ ಭಾರತದ ಪ್ರಧಾನಿಯಾದರೇನಂತೆ, ಇಂದಿರಾಗಾಂಧಿಯವರೂ ಎಲ್ಲಾ ರೀತಿಯ ಭಾವನಾತ್ಮಕ ಬಂಧಗಳ ಬಂಧಿಯಾಗಿದ್ದರು ಅನ್ನುವುದು ಕೂಡ ಬಹಳ ಕುತೂಹಲಕಾರಿಯಾಗಿದೆ.

1977ರ ಲೋಕಸಭಾ ಚುನಾವಣೆ ನಂತರ ‘ಹಳ್ಳಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು’ ಎಂಬ ಹಿರಿಯರ ನಾಣ್ಣುಡಿಯ ಸಾಲುಗಳ ತದ್ರೂಪದಂತೆ ಇದ್ದ ಅವರು ಸಂಪೂರ್ಣ ಏಕಾಂಗಿಯಾಗಿದ್ದರು. ಜೊತೆಗೆ ತುರ್ತು ಪರಿಸ್ಥಿತಿಯ ಭೂತ ಇಂದಿರಾಗಾಂಧಿಯವರ ಹೆಗಲೇರಿತ್ತು. ಅಂದು ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಿತ್ತು. ಇಂದಿರಾ ಗಾಂಧಿಯೂ ಕೂಡ ತಮ್ಮ ರಾಯ್‌ಬರೇಲಿ ಕ್ಷೇತ್ರದಿಂದ ಸೋತಿದ್ದರು. ಕೇಂದ್ರದಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದು ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರು. ಜನತಾ ಸರಕಾರಕ್ಕೆ ಇಂದಿರಾಗಾಂಧಿ ಅವರನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂಬ ಕ್ರೋಧ. ಅಂದಿನ ಜನತಾ ಸರಕಾರದ ಮುಂದುವರಿದ ಭಾಗವೇ ಇಂದಿನ ಭಾರತೀಯ ಜನತಾ ಪಕ್ಷ.

ಅಧಿಕಾರದಲ್ಲಿದ್ದ ಜನತಾ ಪಕ್ಷ ಇಂದಿರಾರನ್ನು ಬೆಳೆಯಲು ಬಿಟ್ಟರೆ ನಮಗೆ ಅಸ್ತಿತ್ವವಿರುವುದಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು. ತುರ್ತು ಪರಿಸ್ಥಿತಿಯ ಅತಿರೇಕಗಳ ಕುರಿತು ತನಿಖೆ ನಡೆಸಿ ಇಂದಿರಾಗಾಂಧಿಯವರನ್ನು ಜೈಲಿಗೆ ಕಳುಹಿಸಬೇಕೆಂದು ಷಡ್ಯಂತ್ರ ಮಾಡಿದ್ದರು. ಅಂದಿನ ಗೃಹ ಸಚಿವ ಚರಣ್ ಸಿಂಗ್ ಇಂದಿರಾರನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಪಟ್ಟು ಹಿಡಿದುಕೂತಿದ್ದರು. ಹಾಗಾಗಿ ಇಂದಿರಾ ಅವರನ್ನು ಬಂಧಿಸುವ ಸಲುವಾಗಿ ತುರ್ತು ಪರಿಸ್ಥಿತಿಯ ಅತಿರೇಕಗಳ ಕುರಿತು ನ್ಯಾಯಮೂರ್ತಿ ಶಾ ಆಯೋಗ ನೇಮಿಸಲಾಯಿತು. ಅಂತಿಮವಾಗಿ ಇಂದಿರಾ ಅವರನ್ನು 1977 ಅಕ್ಟೋಬರ್ 3ರಂದು ಜೀಪ್ ಖರೀದಿ ಹಗರಣದಲ್ಲಿ ಬಂಧಿಸಲಾಯಿತು. ಆದರೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ 24 ಗಂಟೆಯಲ್ಲಿಯೇ ಬಿಡುಗಡೆಗೊಳಿಸಲಾಯಿತು. ಹೇಗಾದರೂ ಸರಿ ಜೈಲಿಗೆ ಕಳುಹಿಸಲೇಬೇಕು ಎಂದು 1974ರಲ್ಲಿ ಸಂಸತ್ ಹಕ್ಕು ಚ್ಯುತಿಗೆ ಇಂದಿರಾ ಕಾರಣರಾಗಿದ್ದರೆಂಬ ಆರೋಪ ಹೊರಿಸಿ ಒಂದು ವಾರಗಳ ಕಾಲ ತಿಹಾರ್ ಜೈಲಿನಲ್ಲಿ ಬಂಧಿಸಿ ಇಡಲಾಯಿತು. ಆದರೂ ಜನತಾ ಸರಕಾರಕ್ಕೆ ಇದು ಸಮಾಧಾನ ಎನಿಸಲಿಲ್ಲ. ಇಂದಿರಾ ಅವರನ್ನು ಸಂಪೂರ್ಣವಾಗಿ ಜೈಲಿನಲ್ಲಿ ಇಡಬೇಕೆಂಬುದು ಅವರ ಮಹತ್ವದ ನಿರ್ಧಾರವಾಗಿತ್ತು. ಇವೆಲ್ಲವುಗಳಿಂದ ಬಿಡುಗಡೆಗೊಳ್ಳುವುದರ ಬಗ್ಗೆ ಯೋಚಿಸುತ್ತಿದ್ದಂತೆಯೆ ಇಂದಿರಾ ಗಾಂಧಿ ಹಣ ಹೂತಿಟ್ಟಿದ್ದಾರೆ ಎಂಬ ಮತ್ತೊಂದು ಆರೋಪ, ಅವರ ಮೆಹ್ರೊಲಿಯಾ ಮನೆಯನ್ನು ಮೆಟಲ್‌ಡಿಟೆಕ್ಟರ್ ಇಟ್ಟುಕೊಂಡು ಶೋಧಿಸಲಾಯಿತು. ಇಂದಿರಾಗಾಂಧಿ ಅವರ ಆಪ್ತರು ಮತ್ತು ಕಾಂಗ್ರೆಸ್‌ನವರನ್ನು ಒಬ್ಬೊಬ್ಬರಾಗಿಯೇ ಬಂಧಿಸಲಾಯಿತು. ಜೊತೆಗೆ ವಿಚಾರಣೆಗಳು, ತನಿಖೆಗಳು ಜನತಾ ಪಕ್ಷದಿಂದ ದಿನೇ ದಿನೇ ಕಿರುಕುಳ. ಇಂತಹ ಸಂದರ್ಭದಲ್ಲಿ ದುತ್ತನೆ ಎದ್ದು ನಿಂತಿದ್ದೇ ಬೆಲ್ಚಿ ಪ್ರಕರಣ.

ಬೆಲ್ಚಿಯು ಬಿಹಾರದ ಪಾಟ್ನಾ ಜಿಲ್ಲೆಯ ಒಂದು ಹಳ್ಳಿ. ಈ ಹಳ್ಳಿಯಲ್ಲಿ ದೇಶವೇ ಬೆಚ್ಚಿ ಬೀಳುವಂತಹ ನರಮೇಧವೊಂದು ನಡೆಯಿತು. ಕಾರಣವಿಷ್ಟೇ, ಕೆಲಸಕ್ಕೆ ತಕ್ಕ ಕಾಳು ಕೇಳಿದರು ಎಂಬ ಒಂದೇ ಕಾರಣಕ್ಕೆ. ಕೃಷಿ ಕೂಲಿ ಕಾರ್ಮಿಕರಿಗೆ ಇಂದಿನ ರೀತಿಯಲ್ಲಿ ಹಿಂದೆ ನಗದು ರೂಪದಲ್ಲಿ ಕೂಲಿ ಕೊಡುತ್ತಿರಲಿಲ್ಲ. ಕೂಲಿ ಕಾರ್ಮಿಕರಿಗೆ ಭತ್ತ, ರಾಗಿ, ಜೋಳ, ಕಾಳು ಹೀಗೆ ದವಸ ಧಾನ್ಯಗಳ ರೂಪದಲ್ಲಿಯೇ ಕೂಲಿ ನಿಗದಿ ಮಾಡಲಾಗುತ್ತಿತ್ತು. ಆದರೆ ಕೂಲಿಗೆ ಹೋಗಿದ್ದ 14 ದಲಿತರಿಗೆ ಕೂಲಿಗೆ ತಕ್ಕಂತೆ ಕಾಳು ಕೊಡಲಿಲ್ಲ. ಅದಕ್ಕಾಗಿ ಅವರು ‘‘ಶ್ರಮಕ್ಕೆ ತಕ್ಕ ಕಾಳು ಕೊಡಿ’’ ಎಂದು ನ್ಯಾಯ ಕೇಳಿದರು. ಅಷ್ಟಕ್ಕೆ ಅಲ್ಲಿನ ಜಮೀನ್ದಾರರು 14 ದಲಿತರನ್ನು ಜೋಳದ ಹುಲ್ಲಿನ ಮೆದೆಗೆ ಹಾಕಿ ಪೆಟ್ರೋಲ್ ಸುರಿದು ಸುಟ್ಟುಬಿಟ್ಟರು. ಸ್ಥಳೀಯ ರಾಜಕಾರಣಿಗಳು ಮತ್ತು ರೌಡಿಗಳ ಬೆಂಬಲದಿಂದ ಸವರ್ಣೀಯ ಪಡೆ ಹೊತ್ತಿ ಉರಿವ ಹೆಣಗಳ ಮುಂದೆ ಹೋಳಿ ಹಬ್ಬ ಆಚರಿಸಿ ಅಟ್ಟಹಾಸ ಮೆರೆದಿದ್ದರು. ಇದರಿಂದ ದೇಶದ ಜನರೇ ಆಘಾತಕ್ಕೊಳಗಾಗಿದ್ದರು. ಅಂದು ವಿಧಾನಸಭೆ ಮತ್ತು ಪಾರ್ಲಿಮೆಂಟ್‌ನಲ್ಲಿಯೂ ಇದು ದೊಡ್ಡ ಮಟ್ಟದ ಚರ್ಚೆ. ಅಂದು 1977 ಆಗಸ್ಟ್ ತಿಂಗಳು ದೇಶದಾದ್ಯಂತ ದಲಿತರು ‘‘ಇಂದಿರಾಜಿ ನೀವಿಲ್ಲದೆ ನಾವು ಅನಾಥರಾಗಿದ್ದೇವೆ, ನಿಮ್ಮ ಗೈರಿನಲ್ಲಿ ದಲಿತರ ಮಾರಣ ಹೋಮ ನಡೆಯುತ್ತಿದೆ ನಮ್ಮನ್ನು ರಕ್ಷಿಸಿ’’ ಎಂದು ಅಂಗಲಾಚಿದರು.ಅಂದು ಇಂದಿರಾ ಗಾಂಧಿಯದು ಕೆಟ್ಟ ಸಂದರ್ಭ. ಹಲವು ಆರೋಪಗಳ ಸಿಬಿಐ ವಿಚಾರಣೆ. ಹೋದ ಕಡೆಯಲ್ಲೆಲ್ಲಾ ಚಪ್ಪಲಿ ಎಸೆತ, ಕಲ್ಲುತೂರುವುದು, ಕಪ್ಪುಬಾವುಟ ಪ್ರದರ್ಶನವನ್ನು ಜನತಾ ಸರಕಾರ ಮಾಡಿಸುತ್ತಿತ್ತು. ಇಂದು ಈ ಜನತಾ ಪಕ್ಷದ ದಲಿತ ಎಮರ್ಜೆನ್ಸಿಯಲ್ಲಿ ತಾನು ದಲಿತರ ಪರವಾಗಿ ನಿಲ್ಲಬೇಕು. ವಿಚಾರಣೆಗೆ ಹಾಜರಾಗದಿದ್ದರೆ ಅದೇನಾಗುತ್ತದೆಯೊ ಆಗಲಿ ಎಂದು ಎಲ್ಲಾ ವಿಚಾರಣೆಗಳನ್ನು ಪಕ್ಕಕ್ಕಿಟ್ಟು ಇಂದಿರಾ ಸೀದಾ ಬೆಲ್ಚಿಯ ಹಾದಿ ಹಿಡಿದರು.

ಬೆಲ್ಚಿಗೆ ಹೋದಾಗ ಭಾರೀ ಮಳೆ. ಸ್ವಲ್ಪದೂರ ಹೋಗುತ್ತಿದ್ದಂತೆಯೆ ಮಳೆ ಮತ್ತಷ್ಟು ಜೋರಾಗಿ ರಸ್ತೆ ಹದಗೆಟ್ಟು ತಂದಿದ್ದ ಕಾರನ್ನು ಟ್ರ್ಯಾಕ್ಟರ್ ಎಳೆದುಕೊಂಡು ಹೋಗುವಂತಾಯಿತು. ಈಗ ಹಳ್ಳಿಯನ್ನು ತಲುಪಬೇಕೆಂದರೆ ನದಿ ದಾಟಬೇಕು. ನದಿಯನ್ನು ದಾಟಿಸಲು ಅಂಬಿಗರು ಹೆದರಿದರು. ಕೊನೆಗೆ ಗ್ರಾಮಸ್ಥರು ಆನೆ ತಂದು ಅದರ ಮೂಲಕ ದಾಟಿಸಿ ಇಂದಿರಾ ಅವರನ್ನು ಹಳ್ಳಿಗೆ ಕರೆದುಕೊಂಡು ಹೋದರು. ಬೆಲ್ಚಿ ತಲುಪಿದಾಗ ಕಗ್ಗತ್ತಲು. ತಾವೇ ಸೋಲಿಸಿದ ಇಂದಿರಾರನ್ನು ಕಂಡು ಹಳ್ಳಿಯ ಜನ ದಂಗಾದರು. ಆ ಅನ್ಯಾಯಕ್ಕೊಳಗಾದ ಜನರಿಗೆ ಬೇಕಿದ್ದು ಹಕ್ಕೊತ್ತಾಯ ಮತ್ತು ಮನಸ್ಸಿಗೆ ಒಂದಷ್ಟು ಸಾಂತ್ವನ. ಆ ನೊಂದವರಿಗೆ ಧೈರ್ಯ ತುಂಬಿ ಸರಿರಾತ್ರಿಯೇ ಹಿಂದಿರುಗುವಾಗ ನದಿಯ ದಡದಲ್ಲಿ ಎಲ್ಲಿಲ್ಲದ ಸಡಗರ. ಆಗಲೇ ಸತ್ತು ಹೋಗಿದ್ದ ಕನಸು ಇಂದಿರಾ ಅವರಲ್ಲಿ ಮತ್ತೆ ಚಿಗುರೊಡೆಯಿತು. ಅದೇ ಹುರುಪಿನಲ್ಲಿ ದೇಶವನ್ನೆಲ್ಲಾ ಸುಂಟರಗಾಳಿಯಂತೆ ಸುತ್ತಿದರು. ಅಷ್ಟೊತ್ತಿಗೆ ಎಲ್ಲಾ ಆರೋಪಗಳಿಂದ ಮುಕ್ತವಾಗಿಬಿಟ್ಟಿದ್ದರು. ಯಾವ ಜನರು ಪಕ್ಷವನ್ನು ಸೋಲಿಸಿದರೋ? ಯಾವ ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿ ಸೋತರೋ ಮತ್ತೆ ಅಲ್ಲೇ ಗೆದ್ದರು. ದೇಶಾದ್ಯಂತ 542 ಕ್ಷೇತ್ರಗಳ ಪೈಕಿ 351 ಕ್ಷೇತ್ರಗಳಲ್ಲಿ ಗೆದ್ದು ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದರು. ಅಷ್ಟೊತ್ತಿಗೆ ಜನತಾ ಪಕ್ಷ ಧೂಳು ಹಿಡಿದಿತ್ತು.

ಬೆಲ್ಚಿಯಲ್ಲಿ ಈ ಘಟನೆ ನಡೆದು 43 ವರ್ಷಗಳು ಕಳೆದು ಹೋದವು. ಅದನ್ನು ಮತ್ತೆ ನೆನಪು ಮಾಡಿಕೊಟ್ಟಿದ್ದು ಇಂದಿರಾರ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿ. ಇತ್ತೀಚೆಗೆ ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಕ್ಕೊತ್ತಾಯಕ್ಕಾಗಿ ಪ್ರಿಯಾಂಕಾ ಬಂದಾಗ ಆಕೆ ಥೇಟ್ ಬೆಲ್ಚಿಗೆ ಬಂದ ತನ್ನ ಅಜ್ಜಿಯಂತೆ ಕಾಣುತ್ತಿದ್ದರು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಹೆಣ್ಣು ಮಗಳೊಬ್ಬಳನ್ನು ಅಲ್ಲಿನ ಠಾಕೂರ್ ಜನಾಂಗದ ನಾಲ್ಕು ಹುಡುಗರು ಸೆಪ್ಟ್ಟಂಬರ್ 14ರಂದು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ, ನಾಲಿಗೆಯನ್ನು ಕತ್ತರಿಸಿ, ಕತ್ತಿನ ಮೂಳೆಯನ್ನು ಮುರಿದು ನಿರ್ಧಯವಾಗಿ ಕೊಂದಿದ್ದರು. ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರಕಾರ ಪೊಲೀಸರ ಮೂಲಕ ರಾತ್ರೋರಾತ್ರಿ ಯಾರಿಗೂ ಮಾಹಿತಿ ತಿಳಿಸದೆ, ಯುವತಿಯ ಕುಟುಂಬದ ಅನುಮತಿಯನ್ನೂ ಕೇಳದೆ ಆಕೆಯ ದೇಹವನ್ನು ಸುಟ್ಟು ಹಾಕಿತ್ತು. ಇದು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬದ ಪರವಾಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹಾಥರಸ್‌ಗೆ ತೆರಳಿದರು. ಹೋಗುವ ಮಾರ್ಗದಲ್ಲಿ ಪೊಲೀಸರು ರಾಹುಲ್‌ಗಾಂಧಿಯನ್ನು ತಡೆದು ತಳ್ಳಿ ನೆಲಕ್ಕೆ ಉರುಳಿಸಿದರು. ಆ ದಿನ ಕುಟುಂಬ ಭೇಟಿಗೆ ಅವಕಾಶ ಸಿಗಲಿಲ್ಲ.

ಲಕ್ಷಾಂತರ ಜನರ ಬೆಂಬಲದೊಂದಿಗೆ ಪ್ರಿಯಾಂಕಾ ಮರುದಿನವೇ ರಾಹುಲ್‌ರ ಜೊತೆ ತೆರಳಿದರು. ಹಾಥರಸ್‌ಗೆ ಬರದಂತೆ ಮಾರ್ಗ ಮಧ್ಯೆ ಸಾವಿರಾರು ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಪ್ರಿಯಾಂಕಾರ ಹಿಂದೆ ಬಂದ ಜನರ ಸಂಖ್ಯೆ ನೋಡಿ ಯೋಗಿ ಸರಕಾರ ನಡುಗಿತು. ಕೊನೆಗೆ ರಾಹುಲ್ ಮತ್ತು ಪ್ರಿಯಾಂಕಾ ಸೇರಿ ಐವರಿಗೆ ಯುವತಿಯ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಪ್ರಿಯಾಂಕಾ, ರಾಹುಲ್ ಪೊಲೀಸರ ದರ್ಪಕ್ಕೆ ಹೆದರದೆ ಯುವತಿಯ ಕುಟುಂಬದ ಬಳಿ ತಲುಪಿದರು. ತಾವು ಸತ್ಯ ಹೇಳುತ್ತೇವೆಂದು ತಮ್ಮನ್ನು ಕೊಲ್ಲಬಹುದು ಎಂಬ ಆತಂಕದಲ್ಲಿ ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿತ್ತು. ಮನೆ ಒಳಗೆ ಪ್ರವೇಶಿಸಿದ ಪ್ರಿಯಾಂಕಾ ಯುವತಿಯ ತಾಯಿಯನ್ನು ಎದೆಗವಚಿಕೊಂಡು ಸಮಾಧಾನಿಸಿದರು. ರಾಹುಲ್ ತಲೆತಗ್ಗಿಸಿ ಅನ್ಯಾಯಕ್ಕೊಳಗಾದ ಕುಟುಂಬಸ್ಥರ ಮಾತು ಆಲಿಸುತ್ತಿದ್ದರು. ಈ ನಡೆ ದೇಶದ ಪ್ರಜಾಪ್ರಭುತ್ವಕ್ಕೆ ಜೀವತಂದಂತೆ ಕಂಡವು. ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಬೇಕಾಗಿದ್ದು ನ್ಯಾಯ ಮತ್ತು ಹಿಡಿಮುಷ್ಟಿ ಧೈರ್ಯ ಮತ್ತು ಸಾಂತ್ವನ.

ಇದೀಗ ರಾಹುಲ್, ಪ್ರಿಯಾಂಕಾ ಸೇರಿದಂತೆ 200 ಜನಕ್ಕೂ ಮೇಲ್ಪಟ್ಟು ಎಫ್‌ಐಆರ್ ದಾಖಲಾಗಿದೆ. ದಲಿತ ಯುವತಿಗೆ ನ್ಯಾಯ ಸಿಗಲು ನಡೆಸಿದ ಹೋರಾಟದ ನೆಪವೇ ಇದಕ್ಕೆ ಕಾರಣವಾಗಿದೆ. ಆದರೆ ಅಜ್ಜಿಯ ಹಾದಿ ತುಳಿದ ಪ್ರಿಯಾಂಕಾ ಇಂದು ಶೋಷಿತ ಸಮುದಾಯಕ್ಕೆ ಹೊಸ ಭರವಸೆಯಾಗಿ ಕಾಣುತ್ತಿದ್ದು, ಬೆಲ್ಚಿಯ ಘಟನೆ ಇಂದಿರಾರಿಗೆ ಮತ್ತೆ ಅಧಿಕಾರದ ಹಳಿಗೆ ಮರಳಲು ಕಾರಣವಾದಂತೆ ಭವಿಷ್ಯದ ದಿನಗಳಲ್ಲಿ ಹಾಥರಸ್ ಪ್ರಕರಣ ಪ್ರಿಯಾಂಕಾರ ರಾಜಕೀಯ ಬದುಕಿಗೂ ಹೊಸ ತಿರುವು ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News