×
Ad

ಟಿಆರ್‌ಪಿ ಹಗರಣ: ಇಲ್ಲಿದೆ ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಮಾಹಿತಿ

Update: 2020-10-09 20:28 IST

ಮುಂಬೈ,ಅ.9: ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ)ಗಳನ್ನು ತಿರುಚುತ್ತಿದ್ದ ಜಾಲವೊಂದನ್ನು ತಾವು ಭೇದಿಸಿರುವುದಾಗಿ ಮುಂಬೈ ಪೊಲೀಸರು ಗುರುವಾರ ಪ್ರಕಟಿಸಿದ್ದಾರೆ. ಅರ್ನಾಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳನ್ನು ಆರೋಪಿಗಳನ್ನಾಗಿ ಪೊಲೀಸರು ಹೆಸರಿಸಿದ್ದಾರೆ.

ಟಿಆರ್‌ಪಿ ಯಾವ ಟಿವಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸಲಾಗಿದೆ ಎಂದು ಸೂಚಿಸುವ ಮಾನದಂಡವಾಗಿದೆ,ಜೊತೆಗೆ ವೀಕ್ಷಕರ ಆಯ್ಕೆ ಮತ್ತು ನಿರ್ದಿಷ್ಟ ವಾಹಿನಿಯ ಜನಪ್ರಿಯತೆಯ ಬಗ್ಗೆಯೂ ಅದು ಮಾಹಿತಿಯನ್ನು ನೀಡುತ್ತದೆ. ಕೆಲವು ಆಯ್ದ ಮನೆಗಳಲ್ಲಿ ಇರಿಸಲಾಗಿರುವ ಸಾಧನಗಳಲ್ಲಿ ದಾಖಲಾಗುವ ಟಿವಿ ವಾಹಿನಿಗಳ ವೀಕ್ಷಣೆಯ ಆಧಾರದಲ್ಲಿ ಟಿಆರ್‌ಪಿಯನ್ನು ಲೆಕ್ಕ ಹಾಕಲಾಗುತ್ತದೆ. ಟಿಆರ್‌ಪಿ ಸಾಧನಗಳನ್ನು ಇಟ್ಟಿರುವ ಮನೆಗಳ ಗುರುತುಗಳನ್ನು ಬಹಿರಂಗಗೊಳಿಸಲಾಗುವುದಿಲ್ಲ. ಟಿಆರ್‌ಪಿಯನ್ನು ಆಧರಿಸಿ ಟಿವಿ ವಾಹಿನಿಗಳಿಗೆ ಜಾಹೀರಾತುಗಳು ದೊರೆಯುತ್ತವೆ. ರಿಪಬ್ಲಿಕ್ ಟಿವಿ, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳು ಇಂತಹ ಕುಟುಂಬಗಳಿಗೆ ಲಂಚ ನೀಡುತ್ತಿದ್ದವು ಹಾಗೂ ಅವರು ಕಾರ್ಯಕ್ರಮ ನೋಡುತ್ತಿಲ್ಲವಾದರೂ ಅಥವಾ ಮನೆಯಲ್ಲಿ ಇಲ್ಲದಿದ್ದರೂ ಟಿವಿಯಲ್ಲಿ ಕೆಲವು ಚಾನೆಲ್‌ಗಳನ್ನು ಚಾಲೂ ಇಡುವಂತೆ ಸೂಚಿಸುತ್ತಿದ್ದವು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಟಿಆರ್‌ಪಿ ಹಗರಣದ ಕೇಂದ್ರಬಿಂದುವಾಗಿ ಗಮನ ಸೆಳೆದಿರುವ ರಿಪಬ್ಲಿಕ್ ಟಿವಿ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದೆ. ಆದರೆ ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಕುರಿತು ಜನರಿಗೆ ಹೆಚ್ಚಿನ ಮಾಹಿತಿಗಳಿಲ್ಲ.

ಫಕ್ತ್ ಮರಾಠಿ

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಫಕ್ತ್ ಮರಾಠಿ ವಾಹಿನಿಯ ಮಾಲಿಕ ಶಿರೀಷ್ ಪಟ್ಟಣಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ಆರಂಭಗೊಂಡ ಈ ಮನೋರಂಜನಾ ವಾಹಿನಿಯು ಎಂಟರ್10 ಟೆಲಿವಿಷನ್ ಪ್ರೈ.ಲಿ.ನ ಒಡೆತನದಲ್ಲಿದೆ. ಅದರ ಕಾರ್ಯಕ್ರಮ ಪ್ರಸಾರವು ಮಹಾರಾಷ್ಟ್ರಕ್ಕೆ ಸೀಮಿತಗೊಂಡಿದ್ದು,ಮರಾಠಿ ಧಾರಾವಾಹಿಗಳು ಮತ್ತು ಮರಾಠಿ ಸಿನಿಮಾಗಳನ್ನು ಪ್ರಸಾರ ಮಾಡುತ್ತದೆ. ಎಂಟರ್10 ಟಿವಿ ಪ್ರೈ.ಲಿ. ಫಕ್ತ್ ಮರಾಠಿ ಸೇರಿದಂತೆ ನಾಲ್ಕು ವಾಹಿನಿಗಳನ್ನು ಹೊಂದಿದೆ. ಫಕ್ತ ಮರಾಠಿ ಉಚಿತ ವಾಹಿನಿಯಾಗಿದೆ. ಜನಪ್ರಿಯ ಹಿಂದಿ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ದ ಮರಾಠಿಗೆ ಡಬ್ ಮಾಡಲಾದ ಆವೃತ್ತಿಗಳನ್ನೂ ಫಕ್ತ್ ಮರಾಠಿ ಪ್ರಸಾರಿಸಿದೆ.

 ಬಾಕ್ಸ್ ಸಿನೆಮಾ

ಬಾಕ್ಸ್ ಸಿನಿಮೀಡಿಯಾ ಸರ್ವಿಸಸ್ ಪ್ರೈ.ಲಿ.ನ ಒಡೆತನಕ್ಕೆ ಸೇರಿರುವ ಬಾಕ್ಸ್ ಸಿನಿಮಾ ವಾಹಿನಿಯನ್ನು ನಾರಾಯಣ ಶರ್ಮಾ 2016ರಲ್ಲಿ ಸ್ಥಾಪಿಸಿದ್ದರು. ಇದು ಕೂಡ ಉಚಿತ ವಾಹಿನಿಯಾಗಿದ್ದು ಹಿಂದಿ ಮತ್ತು ಹಿಂದಿಗೆ ಡಬ್ ಮಾಡಲಾದ ಕೆಲವು ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಪ್ರಸಾರ ಮಾಡುತ್ತದೆ.

ಸಾಕ್ಷಿಗಳು ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ,ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳನ್ನು ನಿರ್ದಿಷ್ಟವಾಗಿ ಹೆಸರಿಸಿದ್ದಾರೆ.

 ರಿಪಬ್ಲಿಕ್ ಟಿವಿಯು ಸುಷಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಆಯುಕ್ತ ಪರಮಬೀರ ಸಿಂಗ್ ಅವರನ್ನು ಪ್ರಶ್ನಿಸಿತ್ತು ಮತ್ತು ಇದೇ ಕಾರಣದಿಂದ ತನ್ನ ವಾಹಿನಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಎಂದು ಗೋಸ್ವಾಮಿ ಹೇಳಿದ್ದಾರೆ. ತನ್ಮಧ್ಯೆ ಸಿಂಗ್ ಅವರು,ಈ ಮೂರೂ ವಾಹಿನಿಗಳ ಬ್ಯಾಂಕ್ ಖಾತೆಗಳನ್ನು

ತನಿಖೆಗೊಳಪಡಿಸಲಾಗಿದೆ ಮತ್ತು ಹಗರಣಕ್ಕೆ ಸಂಬಂಧಿಸಿದವರನ್ನು ಮುಂದಿನ ವಿಚಾರಣೆಗಾಗಿ ಪೊಲೀಸರು ಕರೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News