×
Ad

ಹತ್ರಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತ ಕುಟುಂಬ ಅಕ್ರಮ ಬಂಧನದಲ್ಲಿದೆಯೆಂದು ದೂರಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2020-10-09 20:33 IST

ಲಕ್ನೋ,ಅ.9: ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತ ಯುವತಿಯ ಕುಟುಂಬದ ಪರವಾಗಿ ಅಖಿಲ ಭಾರತೀಯ ವಾಲ್ಮೀಕಿ ಮಹಾಪಂಚಾಯತ್‌ನ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಹರ್ಯಾಣ ನಿವಾಸಿ ಸುರೇಂದ್ರ ಕುಮಾರ್ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಗುರುವಾರ ವಜಾಗೊಳಿಸಿದ್ದು, ವಿಷಯವು ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣಾಧೀನವಾಗಿದೆ ಎಂದು ಬೆಟ್ಟು ಮಾಡಿದೆ. ಸಂತ್ರಸ್ತ ಕುಟುಂಬವು ತನ್ನನ್ನು ಸಂಪರ್ಕಿಸಿದ್ದು,ಅದನ್ನು ಜಿಲ್ಲಾಡಳಿತವು ಅಕ್ರಮ ಬಂಧನದಲ್ಲಿರಿಸಿದೆ ಎಂದು ಆರೋಪಿಸಿದ್ದ ಕುಮಾರ್, ದಿಲ್ಲಿಗೆ ಪ್ರಯಾಣಿಸಲು ಕುಟುಂಬಕ್ಕೆ ಅವಕಾಶ ನೀಡಬೇಕು ಎಂದು ಹೇಳಿದ್ದರು.

 ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ಬಗ್ಗೆ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ ಬಳಿಕ ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದ ಅ.1ರ ನಿರ್ದೇಶದ ಮೇರೆಗೂ ಸಂತ್ರಸ್ತ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ ಪೀಠವು,ಅರ್ಜಿದಾರರಿಗೆ ಏನಾದರೂ ದೂರಿದ್ದರೆ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಬಹುದು ಎಂದು ಹೇಳಿತು.

ಅ.1ರ ಕಲಾಪದಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಉಚ್ಚ ನ್ಯಾಯಾಲಯವು ಅ.12ರಂದು ಮುಂದಿನ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಹಿರಿಯ ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರಿಗೆ ನಿರ್ದೇಶ ನೀಡಿದೆ. ಸಂತ್ರಸ್ತ ಕುಟುಂಬದ ಹೇಳಿಕೆಯನ್ನು ಆಲಿಸಲು ಅದರ ಉಪಸ್ಥಿತಿಯನ್ನೂ ನ್ಯಾಯಾಲಯವು ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News