ಭೀಮಾ-ಕೋರೆಗಾಂವ್ ಪ್ರಕರಣ: ಆರೋಪಪಟ್ಟಿ ಸಲ್ಲಿಸಿದ ಎನ್ಐಎ

Update: 2020-10-09 18:22 GMT

ಹೊಸದಿಲ್ಲಿ,ಅ.9: ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‌ನಲ್ಲಿ 2018ರಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಸಾಮಾಜಿಕ ಹೋರಾಟಗಾರರಾದ ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ,ದಿಲ್ಲಿ ವಿವಿಯ ಸಹಾಯಕ ಪ್ರೊಫೆಸರ್ ಹನಿ ಬಾಬು ಸೇರಿದಂತೆ ಎಂಟು ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಸಾಮಾಜಿಕ ಹೋರಾಟಗಾರರಾದ ಸಾಗರ ಗೋರ್ಖೆ,ರಮೇಶ ಗಾಯ್ಚೋರ್,ಜ್ಯೋತಿ ಜಗತಾಪ್,ಸ್ಟಾನ್ ಸ್ವಾಮಿ ಮತ್ತು ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಅವರೂ ಆರೋಪಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದಾರೆ.

 ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮಾನವ ಹಕ್ಕುಗಳ ಹೋರಾಟಗಾರ,83ರ ಹರೆಯದ ಫಾ.ಸ್ಟಾನ್ ಸ್ವಾಮಿ ಅವರನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿದ್ದು,ಇದು ಪ್ರಕರಣದಲ್ಲಿ ತೀರ ಇತ್ತೀಚಿನ ಬಂಧನವಾಗಿದೆ. ಸ್ವಾಮಿ ಬಂಧನದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರಕರಣವು 2017,ಡಿ.31 ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್‌ನ ಸಮಾವೇಶಕ್ಕೆ ಸಂಬಂಧಿಸಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಮಾನವ ಹಕ್ಕು ಹೋರಾಟಗಾರರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದು,ಇದರಿಂದಾಗಿ ಮರುದಿನ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರ ಭುಗಿಲ್ಲೆದ್ದಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು,ಇತರ ಹಲವರು ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಕಟು ಟೀಕಾಕಾರರಾಗಿರುವ ಹಲವಾರು ಎಡಪಂಥೀಯ ಬುದ್ಧಿಜೀವಿಗಳನ್ನು ಬಂಧಿಸಲಾಗಿದ್ದು,ಇದು ಭಿನ್ನಾಭಿಪ್ರಾಯಗಳನ್ನು ಅಡಗಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚನ್ನೂ ತಾನು ಬಯಲಿಗೆಳೆದಿರುವುದಾಗಿ ಎನ್‌ಐಎ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News