ವರದಕ್ಷಿಣೆ ಕಿರುಕುಳ ಪ್ರಕರಣ: ರಾತ್ರೋರಾತ್ರಿ ವಿಚಾರಣೆ ನಡೆಸಿ ಸೇನಾಧಿಕಾರಿಯನ್ನು ಸೇನಾ ಕಸ್ಟಡಿಗೆ ಕಳುಹಿಸಿದ ನ್ಯಾಯಾಲಯ

Update: 2020-10-09 17:18 GMT

ಭುವನೇಶ್ವರ, ಅ. 9: ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿ ಗುರುವಾರ ರಾತ್ರೋರಾತ್ರಿ ವಿಚಾರಣೆ ನಡೆಸಿದ ಭುವನೇಶ್ವರದ ಸ್ಥಳೀಯ ನ್ಯಾಯಾಲಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸೇನಾ ಮೇಜರ್‌ನನ್ನು ಕಾರಾಗೃಹದ ಬದಲು ಸೇನಾ ಕಸ್ಟಡಿಗೆ ನೀಡಲು ಆದೇಶಿಸಿದೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಪ್ರಯತ್ನ ವಿಫಲವಾದ ಬಳಿಕ ರಾತ್ರಿ 10 ಗಂಟೆಗೆ ನ್ಯಾಯಾಲಯಕ್ಕೆ ಆಗಮಿಸಿದ ಉಪ ವಿಭಾಗೀಯ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ. ಮಿಶ್ರಾ ವಿಚಾರಣೆಯನ್ನು ತಡ ರಾತ್ರಿ 1.30ರ ವರೆಗೆ ಮುಂದುವರಿಸಿದರು. ವಿಚಾರಣೆಯ ಬಳಿಕ ನ್ಯಾಯಮೂರ್ತಿ ಎಸ್.ಕೆ. ಮಿಶ್ರಾ, ಬಂಧಿತ ಮೇಜರ್ ಅವರನ್ನು ಜೈಲಿಗೆ ಕಳುಹಿಸುವ ಬದಲು ಸೇನಾ ಕಸ್ಟಡಿಗೆ ನೀಡುವಂತೆ ಆದೇಶಿಸಿದರು.

ವರದಕ್ಷಿಣೆಗಾಗಿ ದೈಹಿಕ, ಮಾನಸಿಕ ದೌರ್ಜನ್ಯ ಹಾಗೂ ಹತ್ಯೆ ಯತ್ನ ಆರೋಪಿಸಿ ಮೇಜರ್ ಅವರ ಪತ್ನಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಮೇಜರ್ ಅವರನ್ನು ಈ ಹಿಂದೆ ಬಂಧಿಸಿದ್ದರು. ಈ ಸೇನಾಧಿಕಾರಿ ಭುವನೇಶ್ವರದ ನಯಾಪಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News