×
Ad

ಮೇವು ಹಗರಣ: ಲಾಲೂ ಪ್ರಸಾದ್‌ಗೆ ಜಾಮೀನು, ಆದರೆ ಬಿಡುಗಡೆ ಭಾಗ್ಯವಿಲ್ಲ

Update: 2020-10-09 22:50 IST

ರಾಂಚಿ, ಅ.9: ಮೇವು ಹಗರಣಕ್ಕೆ ಸಂಬಂಧಿಸಿದ ಚಾಯ್‌ಬಾಸ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖಂಡ ಲಾಲೂಪ್ರಸಾದ್ ಯಾದವ್‌ಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರುಗೊಳಿಸಿದೆ ಎಂದು ವರದಿಯಾಗಿದೆ.

ಲಾಲೂ ಪ್ರಸಾದ್ ಅವಿಭಜಿತ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಚಾಯ್‌ಬಾಸ ಖಜಾನೆಯಿಂದ 33.67 ಕೋಟಿ ರೂ. ಹಣವನ್ನು ಅಕ್ರಮವಾಗಿ ಹಿಂಪಡೆದಿರುವ ಪ್ರಕರಣದಲ್ಲಿ ಲಾಲೂ ಪ್ರಸಾದ್‌ಗೆ ಜಾಮೀನು ಮಂಜೂರಾಗಿದೆ. ತಲಾ 50,000 ರೂ. ಮೊತ್ತದ ಎರಡು ವೈಯಕ್ತಿಕ ಬಾಂಡ್, 2 ಲಕ್ಷ ರೂ. ಠೇವಣಿ ಸಲ್ಲಿಸಿ ಜಾಮೀನು ಪಡೆಯಬಹುದು ಎಂದು ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ರಾಂಚಿಯ ರಾಜೇಂದ್ರ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಲಾಲೂಪ್ರಸಾದ್ ಚಿಕಿತ್ಸೆ ಪಡೆದಿರುವ ವಿವರ ಹಾಗೂ ಅವರ ಈಗಿನ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ಒದಗಿಸುವಂತೆ ಲಾಲೂಪ್ರಸಾದರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ಆದರೆ, ಮೇವು ಹಗರಣಕ್ಕೆ ಸಂಬಂಧಿಸಿದ ಡುಮ್ಕ ಖಜಾನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವುದರಿಂದ ಲಾಲೂ ಪ್ರಸಾದ್ ಯಾದವ್ ಇನ್ನೂ ಜೈಲಿನಲ್ಲೇ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News