×
Ad

ಪತ್ರಕರ್ತರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಜಮ್ಮು-ಕಾಶ್ಮೀರ ಹೈಕೋರ್ಟ್

Update: 2020-10-09 23:35 IST

ಶ್ರೀನಗರ, ಅ.9: ‘ಜಮ್ಮು-ಕಾಶ್ಮೀರದಲ್ಲಿ ಕಲ್ಲೆಸೆತದಲ್ಲಿ ತೊಡಗಿರುವವರು ಈಗ ಪ್ರವಾಸಿಗಳನ್ನು ಗುರಿಯಾಗಿಸಿಕೊಂಡಿದ್ದು ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ’ ಎಂಬ ಸುದ್ಧಿಯನ್ನು ಪ್ರಕಟಿಸಿದ್ದ ‘ದಿ ಟೈಮ್ಸ್ ಆಫ್ ಇಂಡಿಯಾ’ದ ಹಿರಿಯ ಪತ್ರಕರ್ತರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಜಮ್ಮು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.

ಸ್ಪಷ್ಟ ಮತ್ತು ನ್ಯಾಯೋಚಿತ ವರದಿಗಾರಿಕೆಯನ್ನು ತಡೆಯಲಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ‘2018ರ ಎಪ್ರಿಲ್ 3ರ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ವರದಿ ದುರುದ್ದೇಶ ಪೂರಿತ ಮತ್ತು ತಪ್ಪು ಮಾಹಿತಿಯನ್ನು ಆಧರಿಸಿದೆ. ಜನರ ಮನದಲ್ಲಿ ಭೀತಿಯ ಭಾವನೆ ಮೂಡಿಸಿ, ರಾಜ್ಯಕ್ಕೆ ಆಗಮಿಸದಂತೆ ಪ್ರವಾಸಿಗಳನ್ನು ತಡೆಯುವ ಉದ್ದೇಶದಿಂದ ಈ ವರದಿ ಪ್ರಕಟವಾಗಿದ್ದು, ವರದಿಯಲ್ಲಿ ಉಲ್ಲೇಖಿಸಿದ ಘಟನೆ ನಡೆದೇ ಇಲ್ಲ’ ಎಂದು ಕೆಲವು ಟ್ರಾವೆಲ್ ಏಜೆನ್ಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ, ಈಗ ಅಸ್ತಿತ್ವ ಕಳೆದುಕೊಂಡಿರುವ ‘ರಣಬೀರ್ ಅಪರಾಧ ಸಂಹಿತೆ’ಯ ಸೆಕ್ಷನ್ 505(1)(ಬಿ)ಯಡಿ ಪ್ರಕರಣ ದಾಖಲಿಸಲಾಗಿತ್ತು. ಇದು ಇಂಡಿಯನ್ ಪೆನಲ್ ಕೋಡ್‌ನ ಸೆಕ್ಷನ್ 505(1)(ಬಿ)ಗೆ ಸಮವಾಗಿದೆ. ಜನರ ಮನಸ್ಸಿನಲ್ಲಿ ಭೀತಿ ಅಥವಾ ದಿಗಿಲು ಮೂಡಿಸುವ ಉದ್ದೇಶದಿಂದ ಗಾಳಿ ಸುದ್ಧಿ ಅಥವಾ ವರದಿ ಪ್ರಕಟಿಸುವುದು ಈ ಸೆಕ್ಷನ್‌ನಡಿ ಬರುತ್ತದೆ ಮತ್ತು ಈ ಅಪರಾಧಕ್ಕೆ 3 ವರ್ಷದ ಜೈಲುಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ಒಟ್ಟಿಗೇ ವಿಧಿಸಬಹುದಾಗಿದೆ. ಪ್ರವಾಸಿಗಳ ಮೇಲೆ ಕಲ್ಲೆಸೆತದ ಘಟನೆ ನಡೆದಿಲ್ಲ ಎಂದು ಪೊಲೀಸ್ ಮಾಧ್ಯಮ ಕೇಂದ್ರ ಹೇಳಿದ್ದರೂ, ಕಲ್ಲೆಸೆತ ನಡೆಯುತ್ತಿದ್ದ ಸ್ಥಳದ ಮೂಲಕ ಪ್ರಯಾಣಿಸುತ್ತಿದ್ದ ಇಬ್ಬರು ಪ್ರವಾಸಿಗಳಿಗೆ ಕಲ್ಲೆಸೆತದಿಂದ ಗಾಯವಾಗಿದೆ ಎಂದು ಹೇಳಿದೆ.

ದೇಶದ ಪ್ರಮುಖ ಮತ್ತು ಗೌರವಾನ್ವಿತ ಮಾಧ್ಯಮ ಸಂಸ್ಥೆಯೊಂದು ಜನರ ಹಿತದೃಷ್ಟಿಯಿಂದ ಸುದ್ಧಿ ಪ್ರಕಟಿಸಿರುವುದರಿಂದ ಪತ್ರಕರ್ತರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಸುದ್ಧಿಸಂಸ್ಥೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವು ವರ್ಗದ ಜನರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಸ್ಪಷ್ಟ ಮತ್ತು ನ್ಯಾಯೋಚಿತ ವರದಿಗಾರಿಕೆಯನ್ನು ನಿರ್ಬಂಧಿಸುವಂತಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿರುವ ಪತ್ರಿಕಾ ಸ್ವಾತಂತ್ರ್ಯವು ನಿರ್ದಿಷ್ಟ ಉದ್ದೇಶಕ್ಕಾಗಿ ಕಾನೂನು ವಿಧಿಸಿರುವ ಸಮಂಜಸವಾದ ನಿಬರ್ಂಧಗಳಿಗೆ ಮಾತ್ರ ಒಳಪಟ್ಟಿರುತ್ತದೆ ಎಂದು ತಿಳಿಸಿ, ಎಫ್‌ಐಆರ್ ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News