4 ಯುವಕರ ಮೇಲೆ ಹೇರಲಾದ ಎನ್‍ಎಸ್‍ಎ ರದ್ದುಗೊಳಿಸಿದ ಮಧ್ಯ ಪ್ರದೇಶ ಹೈಕೋರ್ಟ್
ಭೋಪಾಲ್: ಕಳೆದ ವರ್ಷ ಮಧ್ಯ ಪ್ರದೇಶದ ರಾಜಘರ್ ಜಿಲ್ಲೆಯಲ್ಲಿ ಮುಹರ್ರಂ ಮೆರವಣಿಗೆ ವೇಳೆ ಕತ್ತಿಗಳನ್ನು ಹೊಂದಿದ್ದರೆಂಬ ಕಾರಣಕ್ಕೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ಮಂದಿ ಯುವಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿದ ಪ್ರಕರಣದಲ್ಲಿ ಅಕ್ಟೋಬರ್ 6ರಂದು ತೀರ್ಪು ನೀಡಿದ ಮಧ್ಯ ಪ್ರದೇಶ ಹೈಕೋರ್ಟಿನ ಇಂದೋರ್ ವಿಭಾಗೀಯ ಪೀಠ ನಾಲ್ವರ ವಿರುದ್ಧ ಹೇರಲಾದ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ರದ್ದುಗೊಳಿಸಿದೆಯಲ್ಲದೆ ಅವರ ಬಂಧನ ಆದೇಶ ಕುರಿತಂತೆ 'ತಪ್ಪು ಹೇಳಿಕೆ' ಸಲ್ಲಿಸಿದ ರಾಜ್ಯ ಸರಕಾರಕ್ಕೆ ರೂ. 10,000 ದಂಡ ವಿಧಿಸಿದೆ. "ತಲಾ ಪ್ರಕರಣಕ್ಕೆ ರೂ. 10,000 ಕಾನೂನು ವೆಚ್ಚ ಪಾವತಿಸಿ,'' ಎಂದು ನ್ಯಾಯಾಲಯ ಆದೇಶಿಸಿದೆ ಎಂದು thewire.in ವರದಿ ಮಾಡಿದೆ.
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ನಾಲ್ವರ ಪೈಕಿ 19 ವರ್ಷದ ಹಕೀಂ ಎಂಬಾತನ ಹಿರಿಯ ಸೋದರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಜಸ್ಟಿಸ್ ಎಸ್ ಸಿ ಶರ್ಮ ಹಾಗೂ ಶೈಲೇಂದ್ರ ಶುಕ್ಲಾ ಅವರ ಪೀಠ ಮೇಲಿನ ಆದೇಶ ನೀಡಿದೆ.
ಹಕೀಂ ಹಾಗೂ ಮೂವರು ಇತರರ ವಿರುದ್ಧ ಕಳೆದ ವರ್ಷದ ಮುಹರ್ರಂ ಮೆರವಣಿಗೆಯಲ್ಲಿ ಕತ್ತಿ ಹೊಂದಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿ ಕಲೆಕ್ಟರ್ ಈ ವರ್ಷದ ಸೆಪ್ಟೆಂಬರ್ 4ರಂದು ಆದೇಶ ಹೊರಿಡಿದ್ದರು. ಒಬ್ಬನ ಹೊರತಾಗಿ ಆರೋಪಿಗಳ ಪೈಕಿ ಇತರರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿರಲಿಲ್ಲ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಸರಿಯಾಗಿ ವಿವೇಚಿಸದೆ ಈ ಕ್ರಮ ಕೈಗೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದ ತೀರ್ಪು ನೀಡುವ ವೇಳೆ ನ್ಯಾಯಾಲಯವು ಕಳೆದ ತಿಂಗಳು ಹೈಕೋರ್ಟಿನ ಇಂದೋರ್ ಪೀಠ ನೀಡಿದ್ದ ತೀರ್ಪನ್ನು ಕೂಡ ಉಲ್ಲೇಖಿಸಿದೆ. ಸೆಪ್ಟೆಂಬರ್ 15ರಂದು ನೀಡಲಾದ ಈ ತೀರ್ಪಿನಲ್ಲಿ ಆಗಸ್ಟ್ 30ರಂದು ಮುಹರ್ರಂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಐದು ಮಂದಿ ಮುಸ್ಲಿಮರ ವಿರುದ್ಧ ಎನ್‍ಎಸ್‍ಎ ಹೇರಿದ್ದ ಇಂದೋರ್ ಕಲೆಕ್ಟರ್ ಅವರ ಕ್ರಮವನ್ನು ನ್ಯಾಯಾಲಯ ರದ್ದುಗೊಳಿಸಿತ್ತು.