'ರಿಪಬ್ಲಿಕ್ ಟಿವಿ', 'ಟೈಮ್ಸ್ ನೌ' ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ ಬಾಲಿವುಡ್ ನಿರ್ಮಾಪಕರು
Update: 2020-10-12 17:32 IST
ಹೊಸದಿಲ್ಲಿ : ಬಾಲಿವುಡ್‍ನ ಖ್ಯಾತನಾಮ ಚಿತ್ರ ತಯಾರಕರು ಕೆಲ ಮಾಧ್ಯಮ ಸಂಸ್ಥೆಗಳ ಬೇಜವಾಬ್ದಾರಿಯುತ ವರದಿಗಾರಿಕೆಯ ವಿರುದ್ಧ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಲ್ಕು ಚಿತ್ರೋದ್ಯಮ ಸಂಘಟನೆಗಳು ಹಾಗೂ 34 ಚಿತ್ರ ನಿರ್ಮಾಪಕರು ದಾಖಲಿಸಿರುವ ಈ ಪ್ರಕರಣದಲ್ಲಿ ಕರಣ್ ಜೋಹರ್, ಯಶ್ ರಾಜ್, ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಗಳೂ ಸೇರಿವೆ.
ಈ ಖ್ಯಾತನಾಮರ ಸಂಸ್ಥೆಗಳು ರಿಪಬ್ಲಿಕ್ ಟಿವಿ ಹಾಗೂ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಪ್ರದೀಪ್ ಭಂಡಾರಿ, ಟೈಮ್ಸ್ ನೌ ಮತ್ತದರ ಪ್ರಮುಖ ಪತ್ರಕರ್ತರಾದ ರಾಹುಲ್ ಶಿವಶಂಕರ್ ಹಾಗೂ ನವಿಕಾ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿವೆ.
ಬಾಲಿವುಡ್ ಮತ್ತದರ ಸದಸ್ಯರ ವಿರುದ್ಧ ಬೇಜವಾಬ್ದಾರಿಯುತ, ಅವಮಾನಕರ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಹಾಗೂ ಚಿತ್ರೋದ್ಯಮ ಸದಸ್ಯರ ಮಾಧ್ಯಮ ವಿಚಾರಣೆ ನಡೆಸುವುದನ್ನು ನಿಲ್ಲಿಸಬೇಕೆಂದು ಅಪೀಲಿನಲ್ಲಿ ಕೋರಲಾಗಿದೆ.