ಮಾಸ್ಟರ್ ಚೆಫ್ ಆಸ್ಟ್ರೇಲಿಯಾ ತೀರ್ಪುಗಾರರನ್ನು ನಿಬ್ಬೆರಗಾಗಿಸಿದ ಭಾರತೀಯ ಬಾಲಕ ಮಾಡಿದ್ದೇನು?

Update: 2020-10-12 14:22 GMT

ಹೊಸದಿಲ್ಲಿ : ಜೂನಿಯರ್ ಮಾಸ್ಟರ್ ಚೆಫ್ ಆಸ್ಟ್ರೇಲಿಯಾ ಪಾಕ ಸ್ಪರ್ಧೆಯ ಮೊದಲ ಸರಣಿಯಲ್ಲಿ  13 ವರ್ಷದ ಭಾರತೀಯ ಮೂಲದ ಬಾಲಕ ತನ್ನ ಪಾಕಪ್ರಾವೀಣ್ಯತೆಯಿಂದ  ಈ ಕಾರ್ಯಕ್ರಮದ ಖ್ಯಾತನಾಮ ತೀರ್ಪುಗಾರರನ್ನು ನಿಬ್ಬೆರಗಾಗಿಸಿದ್ದಾನೆ.

ಅಷ್ಟಕ್ಕೂ ಈ ಬಾಲಕ, ದೇವ್ ತಯಾರಿಸಿದ್ದೇನು ಗೊತ್ತೇ? ಲ್ಯಾಂಬ್ ಮುಘ್ಲಾಯಿ ಕರ್ರಿ, ಸ್ಯಾಫ್ರನ್ ರೈಸ್, ರೈತಾ, ಚಟ್ನಿ ಮತ್ತು ಸ್ಮೋಕ್ಡ್ ಚಿಕನ್ ಕಬಾಬ್. ಈತನ ತಯಾರಿ ಅದೆಷ್ಟು ಸ್ವಾದಿಷ್ಟಭರಿತವಾಗಿತ್ತೆಂದರೆ ತೀರ್ಪುಗಾರರು ಅದನ್ನು ಸವಿದು ಬಾಯಿ ಚಪ್ಪರಿಸಿದ್ದಾರೆ.

ಸುಮಾರು 2000 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರೆ ಅಂತಿಮವಾಗಿ ಆಯ್ಕೆಯಾದ 14 ಮಕ್ಕಳಲ್ಲಿ ದೇವ್ ಕೂಡ ಸೇರಿದ್ದ. ಕಾರ್ಯಕ್ರಮದ ಭಾಗವಾಗಿ ಸ್ಪರ್ಧಿಗಳಿಗೆ ಅವರಿಗಿಷ್ಟವಾದ   ಖಾದ್ಯ ತಯಾರಿಸುವ ಸ್ವಾತಂತ್ರ್ಯ ನೀಡಲಾಗಿತ್ತು. ಹೀಗೆ ತಯಾರಿಸಿದ್ದನ್ನು ಅವರು ತೀರ್ಪುಗಾರರಾದ ಮೆಲಿಸ್ಸಾ ಲಿಯೋಂಗ್, ಆಂಡಿ ಆಲ್ಲೆನ್ ಹಾಗೂ ಜೋಕ್ ಝೊನ್‍ಫ್ರಿಲ್ಲೊ ಅವರಿಗೆ ನೀಡಬೇಕಿತ್ತು.

ಈ ಭಾರತೀಯ ಮೂಲದ ಬಾಲಕನ ಪಾಕಪ್ರಾವೀಣ್ಯತೆಗೆ ಎಲ್ಲಾ ತೀರ್ಪುಗಾರರೂ ತಲೆದೂಗುವ ವೀಡಿಯೋ  ಕಾರ್ಯಕ್ರಮದ ಅಧಿಕೃತ ಇನ್‍ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ  `ದೇವ್ಸ್ ಇಂಡಿಯನ್ ಫೀಸ್ಟ್' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದ್ದು ಅದು ವೈರಲ್ ಆಗಿದೆ.

ದೇವ್ ಹೆತ್ತವರಿಬ್ಬರೂ ಭಾರತೀಯರಾಗಿದ್ದು ದೇವ್ ಆಸ್ಟ್ರೇಲಿಯಾದಲ್ಲಿ ಜನಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News