ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2020-10-12 14:53 GMT

ಹೊಸದಿಲ್ಲಿ,ಅ.12: ನೂತನವಾಗಿ ರೂಪಿಸಲಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ನಾಲ್ಕು ವಾರಗಳಲ್ಲಿ ನೋಟಿಸಿಗೆ ಉತ್ತರಿಸುವಂತೆ ಸೂಚಿಸಿದೆ.

ನೋಟಿಸ್ ಹೊರಡಿಸುವುದಕ್ಕೆ ಮುನ್ನವೇ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಕೇಂದ್ರದ ಕಾನೂನು ಅಧಿಕಾರಿಗಳ ದಂಡೇ ನ್ಯಾಯಾಲಯದಲ್ಲಿ ಹಾಜರಿದ್ದುದನ್ನು ಕಂಡು ಪೀಠವು ಅಚ್ಚರಿ ವ್ಯಕ್ತಪಡಿಸಿತು.

ಕೇಂದ್ರವು ಅರ್ಜಿಗಳಿಗೆ ಕ್ರೋಢೀಕೃತ ಉತ್ತರವನ್ನು ಸಲ್ಲಿಸಲಿದೆ ಎಂದು ವೇಣುಗೋಪಾಲ ನ್ಯಾಯಾಲಯಕ್ಕೆ ತಿಳಿಸಿದರು.

ರಾಜ್ಯಸಭಾ ಸದಸ್ಯರಾದ ಮನೋಜ್ ಝಾ (ಆರ್‌ಜೆಡಿ),ತಿರುಚಿ ಶಿವ (ಡಿಎಂಕೆ) ಮತ್ತು ಛತ್ತೀಸ್‌ಗಡ ಕಿಸಾನ್ ಕಾಂಗ್ರೆಸ್‌ನ ರಾಕೇಶ್ ವೈಷ್ಣವ ಅವರು ಪ್ರತ್ಯೇಕವಾಗಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ,ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಮತ್ತು ಅಗತ್ಯ ಸರಕುಗಳ ಮಸೂದೆಗಳು ಸೆ.27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಕಿತದ ಬಳಿಕ ಕಾನೂನುಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News