ನಾನೇಕೆ ಒಳ್ಳೆಯವನಾಗಿರಬೇಕು? -ಜಯಪ್ರಕಾಶ ನಾರಾಯಣ

Update: 2020-10-12 18:36 GMT

ಅರ್ಧ ಪ್ರಕೃತಿಯಿಂದ, ಅರ್ಧ ಸಮಾಜದಿಂದ ರೂಪುಗೊಂಡವನು ಮನುಷ್ಯ. ಹಾಗೆ ನೋಡಿದರೆ, ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಪರಿಕಲ್ಪನೆಯೇ ನಿಸರ್ಗಕ್ಕೆ ಹೊರತಾದದ್ದು. ನಿಸರ್ಗದಲ್ಲಿ ಒಳಿತು ಕೆಡುಕು ಎನ್ನುವುದು ಇಲ್ಲ. ಒಂದು ಸಮಾಜದಲ್ಲಿ ಹೆಚ್ಚು ಜನ ಸಜ್ಜನರು ಮತ್ತು ಒಳ್ಳೆಯವರು ಇದ್ದಾರೆ ಎನ್ನುವುದು ನಿಜ. ಇವರು ಬಾಳಿ ಹೋಗುವ ಬದುಕಿನಲ್ಲಿ ಒಳಿತು-ಕೆಡುಕುಗಳ ಕುರಿತು ತೀರ್ಪು ನೀಡಬೇಕಾದ ಅಗತ್ಯವೇ ಬರುವುದಿಲ್ಲ. ಯಾಕೆಂದರೆ, ಅವರ ಬದುಕು ಒಂದು ಸೀಮಿತ ವಲಯದೊಳಗೆ ಮುಗಿದುಹೋಗುತ್ತದೆ. ಅದರೊಳಗಿರುವ ಸಂಪ್ರದಾಯ ಆಚರಣೆಗಳ ಮೂಲಕವೇ ಅವರು ಸರಿ-ತಪ್ಪುಗಳನ್ನು ನಿರ್ಧರಿಸಿಕೊಳ್ಳುತ್ತಾರೆ. ಆದರೆ ಆ ಸಮಾಜದ ಅಮಾಯಕ ಸಭ್ಯಸ್ಥನಿಗೆ ಸಾಮಾಜಿಕ ಪ್ರಚೋದನೆ ದೊರೆತರೆ, ಕಟುಕನಾಗುತ್ತಾನೆ, ವಂಚಕನಾಗುತ್ತಾನೆ.

ಹಿಂದೆ, ಮನುಷ್ಯ ಒಳ್ಳೆಯವನಾಗಿರಲು ಪ್ರಯತ್ನಪಡುತ್ತಿದ್ದ. ಅವನು ನಂಬಿದ್ದ ಯಾವುದೋ ದೊಡ್ಡ ನೈತಿಕ ಶಕ್ತಿ ಒಳ್ಳೆಯವನಾಗಲು ಅವನಿಗೆ ಪ್ರೇರಣೆ ನೀಡುತ್ತಿತ್ತು. ಆಗ ಅವನು ಸತ್ಯ, ಪ್ರಾಮಾಣಿಕತೆ, ದಯೆ, ನಡತೆ, ನಿಸ್ವಾರ್ಥ ಮುಂತಾದವುಗಳನ್ನು ಒಳ್ಳೆಯತನ ಎಂದುಕೊಂಡಿದ್ದ. ಇಂತಹ ಒಳ್ಳೆಯತನವನ್ನು ಸಾಧಿಸಿಕೊಳ್ಳುವುದೇ ತನ್ನ ದೊಡ್ಡ ನೈತಿಕ ಹೊಣೆಗಾರಿಕೆ ಎಂದುಕೊಂಡಿದ್ದ. ಈ ಪ್ರಯತ್ನ ಮಾಡಿ ಗೆದ್ದನೋ ಅಥವಾ ಬರಿಯ ಯತ್ನವಾಗಷ್ಟೇ ಅದು ಉಳಿಯಿತೋ ಎನ್ನುವುದು ಬೇರೆ ಮಾತು. ಆದರೆ ಒಳ್ಳೆಯವನಾಗಿರಬೇಕೆಂಬುದು ದೇವರ-ಧರ್ಮದ ಆದೇಶ, ಮನುಷ್ಯನ ಏಳಿಗೆಗೆ ಒಳ್ಳೆಯತನ ಅನಿವಾರ್ಯ, ಆತ್ಮ ಸಾಕ್ಷಾತ್ಕಾರಕ್ಕೆ, ಹುಟ್ಟು-ಸಾವುಗಳ ಚಕ್ರದಿಂದ ಮುಕ್ತನಾಗಿ ನಿಜವಾದ ಆನಂದ ಪಡೆಯುವುದಕ್ಕೆ ಒಳ್ಳೆಯತನವೊಂದೇ ಖಚಿತವಾದ ಮಾರ್ಗ- ಹೀಗೆ ಒಳ್ಳೆಯವನಾಗಿರಲಿಕ್ಕೆ ಬೇಕಾದ ಕಾರಣವನ್ನು ಸಮಾಜ ಪ್ರತಿಯೊಬ್ಬನಿಗೂ ಒದಗಿಸುತಿತ್ತು.

ಆದರೆ ಇವತ್ತು ಧರ್ಮದ ಹಿಡಿತ ತಪ್ಪಿಹೋಗಿದೆ. ಭಗವಂತನಲ್ಲಿ ವಿಶ್ವಾಸ ಸಡಿಲವಾಗಿದೆ ನೈತಿಕ ಮೌಲ್ಯಗಳನ್ನು ಕತ್ತಲ ಯುಗದ ಪಳೆಯುಳಿಕೆಗಳು, ಅವು ಬೇಡದ ಹೊರೆ ಎಂದು ಬಿಸಾಡಿದ್ದೇವೆ. ಮಾನವ ಹೃದಯವನ್ನು ಭೌತವಾದ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ, ಒಳ್ಳೆಯತನವನ್ನು ಉಳಿಸಿಕೊಳ್ಳಬೇಕೆಂಬ ಆಸೆಗೆ ಕಾರಣವೇ ಇಲ್ಲ ಎನ್ನುವಂತಾಗಿದೆ. ಹೀಗಿರುವಾಗ, ನಮ್ಮ ಇವತ್ತಿನ ತೊಡಕು ಮತ್ತು ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ನಮಗೆ ಬೇಕಾದ ಮಾದರಿಗಳನ್ನು ರಚಿಸಿಕೊಳ್ಳಲು ಒಳ್ಳೆಯತನ ಏಕೆ ಬೇಕು? ಈ ಪ್ರಶ್ನೆ ಮುಖ್ಯವಾಗುತ್ತದೆ.

ನಾನು ಖಂಡಿತವಾಗಿ ಹೇಳುತ್ತೇನೆ. ಇದರಷ್ಟು ಮುಖ್ಯವಾದ ಪ್ರಶ್ನೆ ಇಂದಿಗೆ ಬೇರೊಂದಿಲ್ಲ.

ಇವತ್ತು ಮನುಷ್ಯ ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸುವ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ ಎಂತಲೂ, ಅದಕ್ಕಾಗಿ ಸಮಾಜವನ್ನು ಸುಧಾರಿಸುವ ಮತ್ತು ಹದಗೊಳಿಸುವ ಕೆಲಸದಲ್ಲಿ ನಿರತನಾಗಿದ್ದಾನೆ ಎಂದೂ ತಿಳಿಯಲಾಗಿದೆ. ಈ ಸೃಷ್ಟಿ ಮತ್ತು ಸುಧಾರಣೆಯ ಚಟುವಟಿಕೆಗಳ ಹಿಂದೆ ಎಷ್ಟೇ ಮಹತ್ವಾಕಾಂಕ್ಷೆ ಇದ್ದರೂ, ಅವನೊಳಗಿನ ಕೆಡುಕೆಂಬ ಬಂಡೆಗೆ ಢಿಕ್ಕಿ ಹೊಡೆಯುತ್ತಲೇ ಇವೆ. ವ್ಯಕ್ತಿತ್ವದ ನವ ನಿರ್ಮಾಣವಿಲ್ಲದೆ, ಹೊಸ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಅಂದರೆ, ಒಬ್ಬ ವ್ಯಕ್ತಿ (ಅದರಲ್ಲೂ ಸಮಾಜದ ಕೆನೆಪದರ-ಎಲೈಟ್) ಒಳ್ಳೆಯವನಾಗದಿದ್ದರೆ, ಆ ಸಮಾಜ ಒಳ್ಳೆಯ ಸಮಾಜವಾಗಿ ಉಳಿಯುವುದಿಲ್ಲ.

ಆಧುನಿಕ ಸಮಾಜದ ಸಮಸ್ಯೆಯ ಜಟಿಲತೆ ಇರುವುದು ಇಲ್ಲಿಯೇ. ಸಾಮಾನ್ಯವಾಗಿ ಮನುಷ್ಯರು ಆದರ್ಶಮಯ ಅಲ್ಲದಿದ್ದರೂ, ಉತ್ತಮವಾದ ಸಮಾಜವನ್ನು ಕಟ್ಟಲು ಬಯಸುತ್ತಾರೆ. ಮನುಷ್ಯನಿಗೆ ಉತ್ತಮ ಸಮಾಜ ಕಟ್ಟಲು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿದೆ, ಆದರೆ ತನ್ನನ್ನು ತಾನು ಕಟ್ಟಿಕೊಳ್ಳಲಾಗದೇ ಹೋದಾಗ, ಉತ್ತಮ ಸಮಾಜದ ಗುರಿ ಮತ್ತು ಆದರ್ಶ ಕೂಡ ಕೈಬಿಟ್ಟು ಹೋಗುತ್ತದೆ. ಅಧಿಕಾರ ಅಂತಸ್ಥಿಗಾಗಿ ಜಗಳ, ಸ್ವಾರ್ಥ ಬೆಳೆಯತೊಡಗುತ್ತವೆ. ಈ ಬೆಳವಣಿಗೆಯಿಂದ ಅವನ ಆದರ್ಶ ಸಮಾಜದ ಬಯಕೆಯೇ ನಾಶವಾಗುತ್ತದೆ.

ಈ ಕ್ಷಣಕ್ಕೆ ಮನುಷ್ಯತ್ವದ ಒಳ್ಳೆಯತನದ ಸಮಸ್ಯೆಯೇ ಅತೀ ಮುಖ್ಯ ಸಮಸ್ಯೆಯಾಗಿದೆ ಎಂದದ್ದು ಈ ಕಾರಣಕ್ಕಾಗಿಯೇ. ಈಗ ದೇವರಿಲ್ಲ, ಆತ್ಮವಿಲ್ಲ, ನೈತಿಕತೆಯಿಲ್ಲ, ಸತ್ತ ನಂತರ ಲೋಕವಿಲ್ಲ, ಹುಟ್ಟು-ಸಾವುಗಳ ಚಕ್ರವೂ ಇಲ್ಲ. ಈಗವನು ಕೇವಲ ಸಾವಯವ ಪದಾರ್ಥಗಳ ಸಂಯೋಗದಿಂದ ಉಂಟಾದ ಒಂದು ಜೀವಿ. ಕಾಲ ಮುಗಿದ ಬಳಿಕ ಈ ಸಾವಯವ ಪದಾರ್ಥದ ಲೋಕದಲ್ಲಿ ಲಯವಾಗುತ್ತಾನೆ. ಹೀಗಿರುವಾಗ, ಮನುಷ್ಯ ತಾನೇಕೆ ತಾನೆ ಒಳ್ಳೆಯವನಾಗಬೇಕೆಂದು ಕೇಳುವ ಸ್ಥಿತಿಗೆ ಬಂದಿದ್ದಾನೆ.

ತನ್ನ ಸುತ್ತಲು ಕೆಡಕೆಂಬುದೇ ಗೆಲ್ಲುತ್ತಿದೆ. ಲಂಚ, ಲಾಭಕೋರತನ, ಸುಳ್ಳು, ವಂಚನೆ, ಕ್ರೌರ್ಯ, ಅಧಿಕಾರದ ರಾಜಕೀಯ, ಹಿಂಸೆ ಇವುಗಳೇ ಜಯಭೇರಿ ಹೊಡಯುತ್ತಿವೆ. ಹೀಗಿರುವಾಗ, ತಾನೇಕೆ ಸದ್ಗುಣಿಯಾಗಿರಬೇಕು? ಇಂದಿನ ಸಮಾಜದ ಮಾನದಂಡಗಳಾಗಲಿ ಮತ್ತು ಭೌತವಾದವೇ ಆಗಿರಲಿ ಅವನು ಹಾಗೇನು ಆಗಬೇಕಿಲ್ಲವೆಂದು ಹೇಳುತ್ತವೆ. ಇಂದು ಕುಟಿಲತನವೇ ಶಕ್ತಿ. ಮನುಷ್ಯ ಅನೀತಿವಂತನಾದಷ್ಟು ಅವನ ಪ್ರಾಬಲ್ಯ ಹೆಚ್ಚುತ್ತದೆ. ಇಂತಹ ಅನೈತಿಕ ಬಾಳಿನಿಂದ ಮನುಕುಲದ ಕನಸು ಮತ್ತು ಆ ಕನಸು ತೋರಿಸಿದ ಗುರಿ-ಎಲ್ಲವೂ ಜಡಗೊಂಡಿವೆ. ಗುರಿ ಗಳೆಲ್ಲವೂ ನಿಷ್ಕ್ರಿಯಗೊಂಡು ಮೂಲೆಗುಂಪಾಗಿವೆ.

ಗತಿತಾರ್ಕಿಕ ಭೌತವಾದ ವನ್ನೇ (Dialectical Materialism) ಒಂದು ಕಾಲದಲ್ಲಿ ದೇವರಂತೆ ಆರಾಧಿಸಿ ದ್ದೇನೆ. ಉಳಿದೆಲ್ಲಾ ತತ್ವಗಳ ಒಡನಾಟಕ್ಕಿಂತ ಇದರ ಒಡನಾಟ ನನಗೆ ಆಪ್ತವೂ ಆಗಿತ್ತು, ತೃಪ್ತಿಕರವೂ ಆಗಿತ್ತು. ಆದರೆ, ನನ್ನ ತಾತ್ವಿಕ ಹುಡುಕಾಟ ಇವತ್ತಿಗೂ ಅಪೂರ್ಣವೇ. ಒಂದಂತು ಖಚಿತ. ಯಾವುದೇ ಭೌತವಾದಿ ಸಂಸ್ಕೃತಿಯೂ ಮನುಷ್ಯನ ಮನುಷ್ಯತ್ವವನ್ನು ಮುಕ್ಕು ಮಾಡುತ್ತದೆ. ಭೌತವಾದವನ್ನು ಆಧರಿಸಿದ ನಾಗರಿಕತೆಯಲ್ಲಿ, ಅವನಿಗೆ ಒಳ್ಳೆಯವನಾಗಿರಲು ಯಾವ ಪ್ರೇರಣೆಯೂ ಇಲ್ಲ. ಗತಿತಾರ್ಕಿಕ ಭೌತವಾದದ ಸಾಮ್ರಾಜ್ಯದಲ್ಲಿ ಭಯದಿಂದ ಜನ ತಗ್ಗಿ ನಡೆಯುತ್ತಾರೆ. ದೇವರ ಸ್ಥಾನವನ್ನು ಆಳುವ ಪಕ್ಷವೇ ವಹಿಸಿಕೊಳ್ಳುತ್ತದೆ. ಈ ಹೊಸ ದೇವರು ವಿಷಕಾರಿಯಾದಾಗ, ಇಡೀ ಜಗತ್ತೇ ವಿಷಮಯವಾಗುತ್ತದೆ.

ಮನುಷ್ಯ ಭೌತವಾದದ ಆಚೆಗೆ ಹೋಗಿ ಹುಡುಕಿದಾಗ ಮಾತ್ರ, ಒಳ್ಳೆಯತನದ ಮಹತ್ವವನ್ನು ಕಂಡುಕೊಳ್ಳಲು ಮತ್ತು ಅದಕ್ಕೆ ಪ್ರೇರಕಗಳನ್ನು ಹುಡುಕಿಕೊಳ್ಳಲು ದಾರಿ ಕಾಣುತ್ತದೆಂಬುದು ನನ್ನ ವಿಶ್ವಾಸವಾಗಿದೆ. ಇನ್ನೂ ಖಚಿತವಾಗಿ ಹೇಳುವುದಾದರೆ, ಭೌತವಾದಿ ತ್ವಾತ್ವಿಕತೆಯಿಂದ ಸಮಾಜದ ಮರುನಿರ್ಮಾಣ ಯಶಸ್ವಿಯಾಗುವುದಿಲ್ಲ ಎಂದೆನಿಸುತ್ತದೆ.

ಹಾಗಾದರೆ, ಮನುಷ್ಯನಿಗೆ ಒಳ್ಳೆಯತನ ಸಹಜ ಅಲ್ಲವೇ? ಮನುಷ್ಯನನ್ನು ಹದ್ದುಬಸ್ತಿನಲ್ಲಿಟ್ಟು ಒಳ್ಳೆಯವನಾಗಿಸಲು ಸಾಮಾಜಿಕ ಕಟ್ಟುಪಾಡು ಗಳು ಬೇಕೇ? ಎಂದು ನೀವು ಕೇಳಬಹುದು. ಹೌದು ಮತ್ತು ಅಲ್ಲ ಎನ್ನುತ್ತೇನೆ ನಾನು.

ಅರ್ಧ ಪ್ರಕೃತಿಯಿಂದ, ಅರ್ಧ ಸಮಾಜದಿಂದ ರೂಪುಗೊಂಡವನು ಮನುಷ್ಯ. ಹಾಗೆ ನೋಡಿದರೆ, ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಪರಿಕಲ್ಪನೆಯೇ ನಿಸರ್ಗಕ್ಕೆ ಹೊರತಾದದ್ದು. ನಿಸರ್ಗದಲ್ಲಿ ಒಳಿತು ಕೆಡುಕು ಎನ್ನುವುದು ಇಲ್ಲ. ಒಂದು ಸಮಾಜದಲ್ಲಿ ಹೆಚ್ಚು ಜನ ಸಜ್ಜನರು ಮತ್ತು ಒಳ್ಳೆಯವರು ಇದ್ದಾರೆ ಎನ್ನುವುದು ನಿಜ. ಇವರು ಬಾಳಿ ಹೋಗುವ ಬದುಕಿನಲ್ಲಿ ಒಳಿತು-ಕೆಡುಕುಗಳ ಕುರಿತು ತೀರ್ಪು ನೀಡಬೇಕಾದ ಅಗತ್ಯವೇ ಬರುವುದಿಲ್ಲ. ಯಾಕೆಂದರೆ, ಅವರ ಬದುಕು ಒಂದು ಸೀಮಿತ ವಲಯದೊಳಗೆ ಮುಗಿದುಹೋಗುತ್ತದೆ. ಅದರೊಳಗಿರುವ ಸಂಪ್ರದಾಯ ಆಚರಣೆಗಳ ಮೂಲಕವೇ ಅವರು ಸರಿ-ತಪ್ಪುಗಳನ್ನು ನಿರ್ಧರಿಸಿಕೊಳ್ಳುತ್ತಾರೆ.

ಆದರೆ ಆ ಸಮಾಜದ ಅಮಾಯಕ ಸಭ್ಯಸ್ಥನಿಗೆ ಸಾಮಾಜಿಕ ಪ್ರಚೋದನೆ ದೊರೆತರೆ, ಕಟುಕನಾಗುತ್ತಾನೆ, ವಂಚಕನಾಗುತ್ತಾನೆ.

ಯಾವುದೇ ಸಮಾಜದ ಸ್ವಭಾವ ಮತ್ತು ಅದು ಬೆಳೆಯುವ ದಿಕ್ಕುದೆಸೆ ಬಹುತೇಕ ನಿರ್ಧಾರಗೊಳ್ಳುವುದು ಆ ಸಮಾಜದ ಕೆನೆಪದರದ (ಎಲೈಟ್) ಜನರಿಂದ. ಅಂದರೆ, ಈ ಕೆನೆಪದರದ ತಾತ್ವಿಕತೆ ಮತ್ತು ನಡೆಯಿಂದ ಉಳಿದ ಜನ ಸಮುದಾಯದ ಭವಿಷ್ಯವು ನಿರ್ಣಯವಾಗುತ್ತದೆ. ಈ ಕೆನೆಪದರ ಯಾವಮಟ್ಟಕ್ಕೆ ದೇವರನ್ನು ಕಳೆದುಕೊಳ್ಳುತ್ತದೋ, ಅನೈತಿಕವಾಗುತ್ತಾ ಹೋಗುತ್ತದೋ, ಅಷ್ಟೆ ಅಷ್ಟೇ ಪ್ರಮಾಣದಲ್ಲಿ ಮಾನವ ಜನಾಂಗದ ಮೇಲೆ ಕೆಡಕು ತನ್ನ ಹಿಡಿತವನ್ನು ಸಾಧಿಸುತ್ತದೆ.

ಹೀಗೆಂದ ಮಾತ್ರಕ್ಕೆ ಭೌತವಾದಿಗಳೆಲ್ಲರೂ ಕಟುಕರು, ಭೌತವಾದಿಗಳಲ್ಲದವರು ಒಳ್ಳೆಯವರೆಂದು ನಾನು ಖಂಡಿತ ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಇಷ್ಟೆ: ಮನುಷ್ಯ ಒಳ್ಳೆಯತವನ್ನು ಪಡೆಯುವುದಕ್ಕೆ ಭೌತವಾದ ಯಾವ ದಾರಿಗಳನ್ನು ಹುಡುಕಿಲ್ಲ. ಒಳ್ಳೆಯತನದ ಅಗತ್ಯವನ್ನು ಕಾಣಬೇಕಾದರೆ, ಭೌತವಾದವನ್ನು ಮೀರಿ ಹೋಗಬೇಕಾಗುತ್ತದೆ.

ಭೌತವಾದವನ್ನು ಮೀರಿ ಹೋಗಬೇಕು ಎಂದಾಗ, ಅದಕ್ಕೊಂದು ನಿರ್ದಿಷ್ಟವಾದ ಆಲೋಚನಾ ಕ್ರಮವಿದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಭೌತಿಕತೆಯೇ ಅಂತಿಮ ಸತ್ಯ ಎನ್ನುವುದನ್ನು ನಿರಾಕರಿಸಿ ನೋಡಿದಾಗ, ಮನುಷ್ಯನ ನೈತಿಕ ಮಟ್ಟ ಮೇಲೇಳುತ್ತದೆ. ಆಗ, ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳಲು, ಹೊರಗಿನ ಅಂಶಗಳನ್ನು ಬದಿಗಿಟ್ಟು, ತನ್ನನ್ನು ತಾನೇ ನೆಚ್ಚಿಕೊಳ್ಳಬೇಕಾಗುತ್ತದೆ. ಇದರಿಂದಾಗಿ, ಮನುಷ್ಯ ತನ್ನ ಸಹಜ ವ್ಯಕ್ತಿತ್ವ, ತನ್ನ ಅಸ್ತಿತ್ವ ಮತ್ತು ತನ್ನ ಗುರಿಯನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾನೆ. ಇದು ಒಳ್ಳೆಯತನವನ್ನು ಸಹಜಗೊಳಿಸಿಕೊಳ್ಳಲು ಮತ್ತು ಸತ್ಯದೆಡೆಗೆ ಹೆಜ್ಜೆ ಹಾಕಲು ಬಲವಾದ ಪ್ರಚೋದನೆಯಾಗುತ್ತದೆ. ಯಾವಾಗ ಮನುಷ್ಯ ಭೌತವಾದವನ್ನು ಮೀರಿ ನಿಲ್ಲುತ್ತಾನೋ, ಆಗ ಮನುಷ್ಯ ಸ್ವಯಂ ತನ್ನನ್ನು ತಾನು ರೂಪಿಸಿಕೊಳ್ಳ್ಳುವೆಡೆಗೆ ಸಾಗುತ್ತಾನೆ.

(ಜಯಪ್ರಕಾಶ ನಾರಾಯಣರ Incentives to Goodness ಲೇಖನದ ಅನುವಾದವಿದು.)

Writer - ಕನ್ನಡಕ್ಕೆ: ಸದಾನಂದ ಆರ್.

contributor

Editor - ಕನ್ನಡಕ್ಕೆ: ಸದಾನಂದ ಆರ್.

contributor

Similar News