ತೆಲಂಗಾಣ : ಭಾರಿ ಮಳೆಗೆ 32 ಮಂದಿ ಮೃತ್ಯು

Update: 2020-10-15 03:41 GMT

ಹೈದರಾಬಾದ್ : ಭಾರಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣದಲ್ಲಿ ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬುಧವಾರ ಮಳೆ ಸಂಬಂಧಿ ಅನಾಹುತಗಳಿಗೆ ಕನಿಷ್ಠ 32 ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಡಿಶಾದಲ್ಲೂ ವ್ಯಾಪಕ ಮಳೆ ಬಿದ್ದಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಮಳೆಯ ರುದ್ರನರ್ತನ ಮುಂದುವರಿದಿದ್ದು, ಕುಂಭದ್ರೋಣ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಅಕ್ಷರಶಃ ನದಿಗಳಾಗಿ ಮಾರ್ಪಟ್ಟಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಗಿದೆ.

ಹೈದರಾಬಾದ್ ನಗರದಲ್ಲೇ ಕನಿಷ್ಠ 18 ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಹಲವು ನಿದರ್ಶನಗಳಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ರಭಸದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಎಂಟು ಮಂದಿಯ ಬಗ್ಗೆ ತಡರಾತ್ರಿವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಒಂದು ಘಟನೆಯಲ್ಲಂತೂ ಹಳೆನಗರದ ಬರ್ಕಾಸ್ ಪ್ರದೇಶದ ವ್ಯಕ್ತಿಯೊಬ್ಬ ರಸ್ತೆ ಮೇಲೆ ಹರಿಯುತ್ತಿದ್ದ ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಹಾಗೂ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.

ವಿಜಯವಾಡ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕಷ್ಟಕರವಾಗಿದ್ದರಿಂದ ಹೈದರಾಬಾದ್ ನಗರ ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಜತೆ ಸಂಪರ್ಕ ಕಡಿದುಕೊಂಡಿದೆ. ನಗರದ ವಿವಿಧ ಭಾಗಗಳಲ್ಲಿ ಇಡೀ ದಿನ ವಿದ್ಯುತ್ ಸಂಪರ್ಕ ಇದ್ದಿರಲಿಲ್ಲ. ಇದು ಐಟಿ ನಗರ ಅಕ್ಷರಶಃ ಸ್ತಬ್ಧಗೊಳ್ಳಲು ಕಾರಣವಾಗಿದ್ದು, ಶೇಕಡ 20ರಷ್ಟು ಟೆಕ್ಕಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಡಿದುಹೋಗಿದೆ.
ಹೈದರಾಬಾದ್‌ನಲ್ಲಿ ಸುಮಾರು 1500 ಐಟಿ ಕಂಪನಿಗಳಿದ್ದು, 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 1.28 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾಫ್ಟ್‌ವೇರ್ ಪ್ರತಿವರ್ಷ ಇಲ್ಲಿಂದ ರಫ್ತಾಗುತ್ತಿದೆ. ಸಾಂಕ್ರಾಮಿಕದ ಕಾರಣದಿಂದ ಶೇಕಡ 95ರಷ್ಟು ಮಂದಿ ಮನೆಗಳಿಂದಲೇ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಗ್ರೇಟರ್ ಹೈದರಾಬಾದ್‌ನ ಇತಿಹಾಸದಲ್ಲೇ ಅತ್ಯಧಿಕ ಮಳೆ ಬುಧವಾರ ಬಿದ್ದಿದ್ದು, 24 ಗಂಟೆಗಳಲ್ಲಿ 324.5 ಮಿಲಿಮೀಟರ್ ಮಳೆಯಾಗಿದೆ. ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಕ ಹಾನಿ ಸಂಭವಿಸಿದೆ. ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಮತ್ತು ಕೃಷ್ಣಾ ಜಿಲ್ಲೆಗಳ 98ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ.

ಉತ್ತರ ಕರ್ನಾಟಕದಲ್ಲೂ ಸೋಮವಾರ ಹಾಗೂ ಮಂಗಳವಾರ ಪ್ರವಾಹ ಪರಿಸ್ಥಿತಿಯಿಂದಾಗಿ ರಸ್ತೆ, ಹೊಲಗಳು ನಾಶವಾಗಿವೆ. ಹಲವು ಮನೆಗಳಿಗೆ ಹಾನಿಯಾಗಿವೆ. ಬೆಳೆದು ನಿಂತ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News