1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರದ ನಿರ್ಧಾರ: ಕಾರಣವೇನು ಗೊತ್ತಾ?
ಹೊಸದಿಲ್ಲಿ,ಅ.16: ಸರಕುಗಳು ಹಾಗೂ ಸೇವಾ ತೆರಿಗೆ ಜಾರಿಯಿಂದಾಗಿ ರಾಜ್ಯ ಸರಕಾರಗಳಿಗೆ ಉಂಟಾಗಿರುವ ಆದಾಯ ನಷ್ಟವನ್ನು ಸರಿದೂಗಿಸಲು 1.1 ಲಕ್ಷ ಕೋಟಿ ರೂ. ಸಾಲವನ್ನು ಪಡೆಯಲಾಗುವುದು ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ಇದರೊಂದಿಗೆ ಜಿಎಸ್‌ಟಿ ಸಂಗ್ರಹದ ಕೊರತೆಯಿಂದ ಉಂಟಾಗಿರುವ ಆದಾಯನಷ್ಟವನ್ನು ಹೊಂದಿಸಿಕೊಳ್ಳಲು ರಾಜ್ಯ ಸರಕಾರಗಳು ಮಾರುಕಟ್ಟೆ ಸಾಲಗಳನ್ನು ಪಡೆಯಬೇಕೆಂಬ ತನ್ನ ನಿಲುವಿನಿಂದ ಕೇಂದ್ರ ಸರಕಾರ ಹಿಂದೆ ಸರಿದಂತಾಗಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ರಾಜ್ಯಗಳಿಗೆ ಪತ್ರವನ್ನು ಬರೆದಿದ್ದಾರೆ.
ಈ ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದಲ್ಲಿ ಉಂಟಾಗಿರುವ ಕೊರತೆಯನ್ನು ಸರಿದೂಗಿಸಲು ಅವು 1.1 ಲಕ್ಷ ಕೋಟಿ ರೂ. ಸಾಲವನ್ನು ಪಡೆಯಲು ಕೇಂದ್ರ ಸರಕಾರ ಗುರುವಾರ ಸಮ್ಮತಿಸಿದೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವಿನ ಬಿಕ್ಕಟ್ಟು ಶಮನಗೊಂಡಂತಾಗಿದೆ.
ಈ ಹಣವನ್ನು ಕೇಂದ್ರ ಸರಕಾರವು ರಾಜ್ಯಗಳಿಗೆ ಅನುದಾನ ಸೆಸ್ ಬಿಡುಗಡೆಯಡಿ ನೀಡಲಿದೆ. ಅಂದರೆ ಕೇಂದ್ರ ಸರಕಾರವು ಸಾಲದ ಹಣವನ್ನು ರಾಜ್ಯಗಳಿಗೆ ನೀಡುವ ಅನುದಾನದ ರೂಪದಲ್ಲಿ ತೋರಿಸಲಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ‘‘ಅತ್ಯಂತ ರಚನಾತ್ಮಕ ಸಹಕಾರವನ್ನು’’ ನೀಡಿರುವುದಕ್ಕಾಗಿ ನಿರ್ಮಲಾ ಅವರು ಪತ್ರದಲ್ಲಿ ರಾಜ್ಯ ಸರಕಾರಗಳಿಗೆ ಪತ್ರದಲ್ಲಿ ಕೃತಜ್ಞತೆ ಅರ್ಪಿಸಿದ್ದಾರೆ. ಕೇಂದ್ರ ಸರಕಾರ ಕಂತುಗಳಲ್ಲಿ ಅಗತ್ಯವಿರುವ ಸಾಲವನ್ನು ಪಡೆದುಕೊಳ್ಳಲಿವೆ ಹಾಗೂ ಅದನ್ನು ರಾಜ್ಯಗಳಿಗೆ ಒಂದಾದ ಬಳಿಕ ಒಂದರಂತೆ ಸಾಲಗಳನ್ನು ರಾಜ್ಯಗಳಿಗೆ ವರ್ಗಾಯಿಸಲಿವೆ. ಇದರಿಂದಾಗಿ ಸಮನ್ವಯತೆ ಹಾಗೂ ಸರಳವಾದ ಸಾಲ ದೊರೆಯುವಿಕೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ ಅನುಕೂಲಕರವಾದ ಬಡ್ಡಿದರವೂ ಕೂಡಾ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಹಾಲಿ ಹಣಕಾಸು ವರ್ಷದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ಹಾವಳಿಯು ಆದಾಯ ಸಂಗ್ರಹಣೆಯ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದವರು ಹೇಳಿದ್ದಾರೆ.
ಆದರೆ ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಸಾಲದ ಹಣವನ್ನು ಅನುದಾನದ ರೂಪದಲ್ಲಿ ತೋರಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ತೆಲಂಗಾಣದ ವಿತ್ತ ಸಚಿವ ಟಿ. ಹರೀಶ್ ರಾವ್ ಹೇಳಿದ್ದ್ಜಾರೆ. 2023ರಲ್ಲಿ ರಾಜ್ಯಗಳಿಗೆ ಎಷ್ಟು ಜಿಎಸ್‌ಟಿ ಪರಿಹಾರ ನೀಡಲಾಗುವುದೆಂಬ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ಕೇರಳದ ವಿತ್ತ ಸಚಿವ ಥಾಮಸ್ ಇಸ್ಸಾಕ್ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿಯ ಸಂಗ್ರಹಣೆಯಲ್ಲಿನ ಅಂದಾಜು ಕೊರತೆಯು 2.35 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೇಂದ್ರ ಸರಕಾರದ ಅಂದಾಜಿನ ಪ್ರಕಾರ, 2020-21ರ ಸಾಲಿನಲ್ಲಿ ರಾಜ್ಯಗಳ ಜಿಎಸ್‌ಟಿ ಸಂಗ್ರಹಣೆಯ ಕೊರತೆಯ ಅಂತರವು 3 ಲಕ್ಷ ಕೋಟಿ ರೂ.ಆಗಲಿದೆ. 65 ಸಾವಿರ ಕೋಟಿ ರೂ. ಮೇಲ್ತೆರಿಗೆ(ಸೆಸ್) ಸಂಗ್ರಹವಾಗುವ ನಿರೀಕ್ಷೆಯಿದ್ದು, 2.35 ಲಕ್ಷ ಕೋಟಿ ರೂ. ಕೊರತೆ ಬೀಳುವ ಸಾಧ್ಯತೆಯಿದೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯಳ ಜಿಎಸ್‌ಟಿ ಪಾಲಿನಲ್ಲಿ ಉಂಟಾಗಿರುವ ಕೊರತೆಯನ್ನು ಸರಿದೂಗಿಸಲು ಅವು ಭಾರತೀ ರಿಸರ್ವ್ ಬ್ಯಾಂಕ್ ಜೊತೆ ಸಮಾಲೋಚಿಸಿ ಯೋಗ್ಯವಾದ ಬಡ್ಡಿದರದಲ್ಲಿ 97 ಸಾವಿರ ಕೋಟಿ ರೂ . ಸಾಲವನ್ನು ಪಡೆಯಲು ಅವಕಾಶ ಒದಗಿಸುವ ಆಯ್ಕೆಯನ್ನು ಕೇಂದ್ರ ಸರಕಾರ ಈ ಹಿಂದೆ ನೀಡಿತ್ತು.
36 ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಪೈಕಿ ಕೇವಲ 21 ರಾಜ್ಯಗಳು ಮಾತ್ರವೇ ಜಿಎಸ್‌ಟಿ ಆದಾಯದಲ್ಲಿ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಲು ಮಾರುಕಟ್ಟೆ ಸಾಲವನ್ನು ಪಡೆಯಲು ಒಪ್ಪಿಕೊಂಡಿದ್ದವು. ಆದರೆ ಪ್ರತಿಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಮಾತ್ರ ತಮ್ಮ ಬದಲಿಗೆ ಕೇಂದ್ರ ಸರಕಾರವೇ ಸಾಲವನ್ನು ಪಡೆದು, ತಮಗೆ ನೀಡಬೇಕೆಂದು ಆಗ್ರಹಿಸಿದ್ದವು.