ಮಧ್ಯಪ್ರದೇಶದಲ್ಲಿ ರೈಲು ಢಿಕ್ಕಿ: ಮೃತ ವ್ಯಕ್ತಿಯ ರುಂಡ ಬೆಂಗಳೂರಿನಲ್ಲಿ ಪತ್ತೆ

Update: 2020-10-16 15:23 GMT
ಸಾಂದರ್ಭಿಕ ಚಿತ್ರ

ಭೋಪಾಲ, ಅ.16: ಮಧ್ಯಪ್ರದೇಶದ ಬೇತುಲ್‌ನಲ್ಲಿ 2 ವಾರದ ಹಿಂದೆ ರೈಲು ಹಳಿಯ ಪಕ್ಕ ವ್ಯಕ್ತಿಯೊಬ್ಬನ ರುಂಡ ರಹಿತ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಮೃತ ವ್ಯಕ್ತಿಯ ರುಂಡ ಬೆಂಗಳೂರಿನಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಇಂಜಿನ್‌ಗೆ ಸಿಕ್ಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಕ್ಟೋಬರ್ 3ರಂದು ಬೇತೂಲ್‌ನ ಮಚ್ನಾ ಸೇತುವೆಯ ಬಳಿ ರೈಲು ಹಳಿಯ ಪಕ್ಕ ಪತ್ತೆಯಾದ ಮೃತದೇಹದಲ್ಲಿ ತಲೆ ಹಾಗೂ ದೇಹದ ಇತರ ಕೆಲವು ಭಾಗಗಳು ಇರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಆ ವ್ಯಕ್ತಿಗೆ ಹೊಸದಿಲ್ಲಿ-ಬೆಂಗಳೂರು ಮಧ್ಯೆ ಓಡುವ ರಾಜಧಾನಿ ರೈಲು ಢಿಕ್ಕಿಯಾಗಿರುವ ಮಾಹಿತಿ ಲಭಿಸಿದೆ. ಅಕ್ಟೋಬರ್ 4ರಂದು ಬೆಂಗಳೂರಿನಲ್ಲಿ ರೈಲು ಸಿಬ್ಬಂದಿ ರೈಲಿನ ಇಂಜಿನ್‌ನಲ್ಲಿ ವ್ಯಕ್ತಿಯೊಬ್ಬನ ತಲೆ ಸಿಕ್ಕಿಕೊಂಡಿರುವುದನ್ನು ಪತ್ತೆಹಚ್ಚಿ ಮಧ್ಯಪ್ರದೇಶ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮೃತ ವ್ಯಕ್ತಿ ಬೇತೂಲ್ ನಿವಾಸಿ 28 ವರ್ಷದ ರವಿ ಮಾರ್ಕಮ್ ಎಂದು ಆತನ ಕುಟುಂಬದವರು ಗುರುತಿಸಿದ್ದಾರೆ.

ಮೃತ ವ್ಯಕ್ತಿಯ ಕುಟುಂಬದವರು ಬಡವರಾಗಿರುವುದರಿಂದ ಬೆಂಗಳೂರಿಗೆ ತೆರಳಲು ಅನಾನುಕೂಲವಾಗಿದೆ. ಆದ್ದರಿಂದ ಮೃತದೇಹದ ತಲೆಯನ್ನು ಬೆಂಗಳೂರಿನಲ್ಲೇ ದಫನ ಮಾಡಿದ್ದು ಉಳಿದ ಭಾಗವನ್ನು ಬೇತೂಲ್‌ನಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಇದು ಆತ್ಮಹತ್ಯೆಯ ಪ್ರಕರಣವೇ ಅಥವಾ ರೈಲು ಹಳಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ರೈಲು ಢಿಕ್ಕಿಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News